ನವದೆಹಲಿ:ಕಳೆದೆರಡು ದಿನಗಳಿಂದ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುವ ವೇಗ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 386 ಹೊಸ ಪ್ರಕರಣ ಕಂಡು ಬಂದಿದ್ದು, ದೇಶದ ಜನರು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ.
ದೇಶದಲ್ಲಿ ಇಲ್ಲಿಯವರೆಗೆ ಪತ್ತೆಯಾದ ಸೋಂಕಿತ ಪ್ರಕರಣ- 1,637
ದೇಶದಲ್ಲಿ ಇದೀಗ ಒಟ್ಟು 1,637 ಕೋವಿಡ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲೇ 386 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ತಿಳಿಸಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚಿಸಿದ ತಬ್ಲೀಜ್ ಕಾರ್ಯಕ್ರಮ:
ಇಲ್ಲಿಯವರೆಗೆ 38 ಜನರು ಸಾವನ್ನಪ್ಪಿದ್ದು, 132 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ಗೋಚರಿಸಿದ್ದು, ಇದಕ್ಕೆ ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೇ ಕಾರಣ ಎಂದು ತಿಳಿಸಿದ್ದಾರೆ.
9 ಆಸ್ಪತ್ರೆಗಳಲ್ಲಿ 18 ಸಾವಿರ ಮಂದಿಗೆ ಕ್ವಾರಂಟೈನ್:
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 18,000 ಜನರನ್ನು 9 ಆಸ್ಪತ್ರೆಗಳಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಅವರು ತಿಳಿಸಿದರು.
ಕ್ವಾರಂಟೈನ್ ಮತ್ತು ಐಸೋಲೇಷನ್‌ಗಾಗಿ ರೈಲು ಕೋಚ್‌ಗಳ ಬಳಕೆ:
ರೈಲ್ವೆಯಲ್ಲಿ 3.2 ಲಕ್ಷ ಕ್ವಾರಂಟೈನ್ ಹಾಗೂ ಐಸೋಲೇಷನ್ ಸೆಂಟರ್ ಓಪನ್ ಮಾಡಲಾಗುತ್ತಿದೆ. ಅದಕ್ಕಾಗಿ 20,000 ಕೋಚ್ ಬಳಕೆ ಮಾಡಲಾಗುತ್ತಿದೆ. ಇದೇ ವೇಳೆ 47,951 ಜನರನ್ನು ಟೆಸ್ಟ್ ಮಾಡಲಾಗಿದ್ದು ಅದಕ್ಕಾಗಿ 126 ಲ್ಯಾಬ್ಸ್ ಬಳಸುತ್ತಿದ್ದೇವೆ. 51 ಖಾಸಗಿ ಲ್ಯಾಬ್ ಕೂಡ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೂಲಿ ಕಾರ್ಮಿಕರಿಗೆ ಪ್ರತ್ಯೇಕ ರಿಲೀಫ್ ಕ್ಯಾಂಪ್:
ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು 21,486 ರಿಲೀಫ್ ಕ್ಯಾಂಪ್ ತೆರೆಯಲಾಗಿದ್ದು, ಅದರೊಳಗೆ 6,75,133 ಜನರಿಗೆ ಆಶ್ರಯ ಒದಗಿಸಲಾಗುತ್ತಿದೆ. ಎಲ್ಲ ರೀತಿಯ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದು ವಿವರಿಸಿದರು.
ಕೇಜ್ರಿವಾಲ್ ಸುದ್ದಿಗೋಷ್ಠಿ:
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೊರೊನಾ ವೈರಸ್ ಶಂಕೆಯಿಂದ 766 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಲ್ಲಿ 120 ಜನರಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ನಿಜಾಮುದ್ದೀನ್ ಪ್ರದೇಶದ ತಬ್ಲೀಜ್ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿದ್ದವರು ಎಂದು ಅವರು ತಿಳಿಸಿದ್ದಾರೆ.
ಇದರ ಜತೆಗೆ 1,810 ಜನರನ್ನು ಐಸೋಲೇಷನ್ನೊಳಗೆ ಇಡಲಾಗಿದ್ದು, ಎಲ್ಲರ ಮೇಲೂ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 10 ಲಕ್ಷ ಬಡವರಿಗೆ ರೇಷನ್ ಕಾರ್ಡ್ ಇಲ್ಲ. ಸರ್ಕಾರದ ಇ-ವೆಬ್ಸೈಟ್ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವಂತೆ ಅವರು ಇದೇ ವೇಳೆ ಮನವಿ ಮಾಡಿದರು.