ಗ್ಯಾಬೊರೊನ್: ವಾಯವ್ಯ ಬೋಟ್ಸ್ವಾನದಲ್ಲಿ ಈ ವರ್ಷ ಬರೋಬ್ಬರಿ 330 ಆನೆಗಳು ಮೃತಪಟ್ಟಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆನೆಗಳ ಸಾವಿಗೆ ಕಾರಣ ಏನು ಎಂಬುದು ಬಹಿರಂಗವಾಗಿದೆ.
ವಿಷಕಾರಿ ನೀಲಿ ಮತ್ತು ಹಸಿರು ಬಣ್ಣದ ಪಾಚಿ ನೀರನ್ನು ಕುಡಿದ ಪರಿಣಾಮ ಆನೆಗಳು ಮೃತಪಟ್ಟಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಸೆರಾಂಗ್ ಪ್ರದೇಶದಲ್ಲಿ ಆನೆಗಳಿಗೆ ಕುಡಿವ ನೀರು ಸಿಗದ ಕಾರಣ ಸೈನೋಬ್ಯಾಕ್ಟೀರಿಯಾ ಇರುವ ವಿಷಕಾರಿ ಹೂವುಗಳನ್ನು ತಿಂದು ಮೃತಪಟ್ಟಿವೆ ಎಂದು ವನ್ಯಜೀವಿ ಮತ್ತು ರಾಷ್ಟ್ರೀಯ ಉದ್ಯಾನಗಳ ಇಲಾಖೆ ಮುಖ್ಯಸ್ಥ ಸಿರಿಲ್ ಟಾವೊಲೊ ತಿಳಿಸಿದ್ದಾರೆ.
ಜೊತೆಗೆ ನೀರಿನ ಡ್ರಿಪ್ ಯೋಜನೆಗಳು ಕೂಡ ಆನೆಗಳ ಸಾವಿಗೆ ಕಾರಣವಾಗಿದೆ. ಆದರೆ, ಇತರ ಯಾವುದೇ ಪ್ರಾಣಿಗಳಿಗೆ ಪಾಚಿ ನೀರಿನಿಂದ ಸಮಸ್ಯೆಯಾಗಿಲ್ಲ. ಅನಾರೋಗ್ಯಕ್ಕೆ ಆನೆಗಳು ತುತ್ತಾದ ಬಳಿಕ ಕತ್ತೆ ಕಿರುಬ ಮತ್ತು ರಣಹದ್ದುಗಳ ಆಹಾರ ಬಗ್ಗೆ ನಿಗಾವಹಿಸಲಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಆಕರ್ಷಣೀಯ ಕೇಂದ್ರ ಬಿಂದುವಾಗಿರುವ ಬೋಟ್ಸ್ವಾನದಲ್ಲಿ 1,30,000 ಆನೆಗಳಿವೆ ಎಂದು ಅಂದಾಜಿಸಲಾಗಿದೆ. ನಿರಂತರವಾಗಿ ಆನೆಗಳ ಸಾವಿಗೆ ಕಾರಣ ತಿಳಿಯಲು ಮೃತ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಗಂಡು ಮತ್ತು ಹೆಣ್ಣಾನೆಗಳ ಪರೀಕ್ಷೆಗೊಳಪಡಿಸಿದಾಗ ನರವೈಜ್ಞಾನಿಕ ಅಸ್ವಸ್ಥತೆ ಅಂಶ ಬೆಳಕಿಗೆ ಬಂದಿದೆ ಎಂದು ಸಿರಿಲ್ ವಿವರಿಸಿದ್ದಾರೆ.