ನೇಪಾಳ:ಭಾರತವು ತನ್ನ 71ನೇ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ 30 ಆ್ಯಂಬುಲೆನ್ಸ್, ಆರು ಬಸ್‌ಗಳನ್ನ ನೇಪಾಳದ ವಿವಿಧ ಆಸ್ಪತ್ರೆ, ದತ್ತಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಉಡುಗೊರೆಯಾಗಿ ನೀಡಿದೆ.
ಕಠ್ಮಂಡುವಿನ ಭಾರತದ ರಾಯಭಾರಿ ಕಚೇರಿಯಲ್ಲೂ ಇಂದು ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ರಾಯಭಾರಿ ಅಧಿಕಾರಿ ಅಜಯ್ ಕುಮಾರ್ ರಾಷ್ಟ್ರಧ್ವಜವನ್ನು ಹಾರಿಸಿ ನಂತರ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರ ಸಂದೇಶ ಓದಿದರು.
ಸಾಮಾಜಿಕ-ಆರ್ಥಿಕ ಅಭಿವೃದ್ಧಿಯತ್ತ ನೇಪಾಳದೊಂದಿಗೆ ಪಾಲುದಾರಿಕೆ ಮಾಡುವ ಭಾರತದ ಬದ್ಧತೆ ಪುನರುಚ್ಛರಿಸುವ ಸಲುವಾಗಿ ಆ್ಯಂಬುಲೆನ್ಸ್ ಮತ್ತು ಬಸ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
ಭಾರತ ಸರ್ಕಾರವು ಈವರೆಗೆ 782 ಆ್ಯಂಬುಲೆನ್ಸ್ ಹಾಗೂ 154 ಬಸ್‌ಗಳನ್ನು ನೇಪಾಳದ 77 ಜಿಲ್ಲೆಗಳ ವಿವಿಧ ಆಸ್ಪತ್ರೆಗಳು, ದತ್ತಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಉಡುಗೊರೆಯಾಗಿ ನೀಡಿದೆ. ಸಾವಿರಾರು ನೇಪಾಳಿ ಜನರಿಗೆ ಆರೋಗ್ಯ ಸೌಲಭ್ಯವನ್ನು ವಿಸ್ತರಿಸಿದೆ. ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಿದೆ.
ನೇಪಾಳದ ಎಲ್ಲಾ ಪ್ರಾಂತ್ಯಗಳಲ್ಲಿರುವ 51 ಗ್ರಂಥಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ರಾಯಭಾರ ಕಚೇರಿಯು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದೆ.