ನವದೆಹಲಿ: ದೆಹಲಿಯಲ್ಲಿ ಮೂರು ಶಂಕಿತ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ.
ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಅನ್ನು ಹೋಲುವ ಮೂರು ಪ್ರಕರಣಗಳು ವರದಿಯಾಗಿದ್ದು, ರೋಗಿಗಳನ್ನು ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಿರುವುದಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮೀನಾಕ್ಷಿ ಬಾರಧ್ವಾಜ್ ತಿಳಿಸಿದ್ದಾರೆ.
ಚೀನಾದಿಂದ ಭಾರತಕ್ಕೆ ಹಲವು ಮಂದಿ ಮರಳಿ ಬಂದಿದ್ದು, ಬಿಹಾರದ ಚಪ್ರಾ ಮೂಲದ ವಿದ್ಯಾರ್ಥಿನಿಯೋರ್ವಳೂ ಸೇರಿ ಹೈದರಾಬಾದ್, ರಾಜಸ್ಥಾನ ಹಾಗೂ ಕೋಲ್ಕತ್ತಾ ಮೂಲದ ವ್ಯಕ್ತಿಗಳಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದಿರುವುದು ಸೋಮವಾರ ವರದಿಯಾಗಿತ್ತು.
ಮಧ್ಯ ಪ್ರದೇಶದಲ್ಲೂ ಶಂಕಿತ ಕೊರೊನಾ ವೈರಸ್:
ಮಧ್ಯ ಪ್ರದೇಶದ ಉಜ್ಜೈನಿಯ ಮಾಧವ್ ನಗರ್ ಆಸ್ಪತ್ರೆಗೆ 20 ವರ್ಷದ ಯುವಕ ದಾಖಲಾಗಿದ್ದು, ಶಂಕಿತ ಕೊರೊನಾ ವೈರಸ್ನಿಂದ ಬಳಲುತ್ತಿರುವುದಾಗಿ ವರದಿಯಾಗಿದೆ. ಈತ ಚೀನಾದಲ್ಲಿ ವೈದ್ಯಕೀಯ ಪದವಿ ಮುಗಿಸಿ ಜನವರಿ 13 ರಂದು ಭಾರತಕ್ಕೆ ಬಂದಿದ್ದಾನೆ. ಸದ್ಯ ಈತನನ್ನು ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಲಾಗಿದೆ.