ಪಣಜಿ (ಗೋವಾ):ಕೆಲ ದಿನಗಳ ಹಿಂದೆ ಗೋವಾದಲ್ಲಿ 10 ಜನ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಪಕ್ಷಾಂತರವಾದ ಮೂರೇ ದಿನದಲ್ಲಿ ಈ ನಾಯಕರಿಗೆ ಬಿಜೆಪಿ, ಮಂತ್ರಿಪದವಿ ನೀಡಿ ಪುರಸ್ಕರಿಸಿದೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಹಾರಿದ ಶಾಸಕರು ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಇದಾದ ಕೆಲ ಗಂಟೆಗಳಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಆದಷ್ಟು ಬೇಗ ಗೋವಾ ಸಚಿವ ಸಂಪುಟ ವಿಸ್ತರಣೆಗೊಳ್ಳಲಿದೆ ಎಂದು ಹೇಳಿದ್ದರು. ಅದಾದ ಬಳಿಕ ತಮ್ಮ ಪಕ್ಷದ ಮೂವರು ಸಚಿವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು.
ಇದೀಗ ಸರಳ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಯಾಗಿ ಚಂದ್ರಕಾಂತ್ ಕವಲಿಕಾರ್ ಪ್ರತಿಜ್ಞೆ ಸ್ವೀಕರಿಸಿದ್ರೆ, ಜೆನ್ನಿಫರ್ ಮಾನ್‌ಸೆರೇಟ್ ಹಾಗೂ ಫಿಲಿಪೆ ರೊಡ್ರಿಗಸ್, ಮಾಜಿ ಉಪಸಭಾಪತಿ ಮೈಕೆಲ್ ಲೋಬೋ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಬಿಜೆಪಿಯ ವಿಜಯ್ ಸರ್ದೇಸಾಯಿ, ವಿನೋದ್ ಪಲಿಯೆಂಕಾರ್ ಹಾಗೂ ಜಯೇಶ್ ಸಾಲ್ಗೋಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಗೋವಾದ 10 ಮಂದಿ ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿ ಸೇರಿದ್ದರು. 40 ಸದಸ್ಯರ ಸದನದಲ್ಲಿ ಕಾಂಗ್ರೆಸ್‍ನ ಹತ್ತು ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದು ಕಮಲ ಪಾಳಯದ ಬಲವನ್ನು 27ಕ್ಕೇರುವಂತೆ ಮಾಡಿದೆ. ಈ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಪುನಾರಚನೆಗೆ ಮುಂದಾಗಿದ್ದರು. ಇದೀಗ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 27 ಸದಸ್ಯ ಬಲ ಹೊಂದಿದೆ.