ಜಮ್ಮು:ಆರ್ಟಿಕಲ್ 370 ಮತ್ತು 35ಎ ವಾಪಸ್ ಪಡೆಯುವ ಮುನ್ನ ಹಾಗೂ ಬಳಿಕ ವಿಧಿಸಲಾಗಿದ್ದ ಸಂವಹನ ಸಂಪರ್ಕಗಳ ಮೇಲಿನ ತಾತ್ಕಾಲಿಕ ನಿಷೇಧವನ್ನು ಇಂದು ಹಿಂತೆಗೆದುಕೊಳ್ಳಲಾಗಿದೆ.
ಆಗಸ್ಟ್ 5ರಂದು ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಅಮಾನತು ಮಾಡಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿ ಪ್ರದೇಶವೆಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು.
ಇದಕ್ಕೂ ಮುನ್ನ ಮುನ್ನೆಚ್ಚರಿಕೆಯ ಕ್ರಮವಾಗಿ ಕಣಿವೆ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇನಾ ತುಕುಡಿಗಳನ್ನು ನಿಯೋಜಿಸಿ ಮಾಜಿ ಸಿಎಂಗಳು, ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ದೂರವಾಣಿ, ಮೊಬೈಲ್ ನೆಟವರ್ಕ್, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಜಮ್ಮು, ರೈಸಿ, ಸಾಂಬಾ, ಕಥುವಾ ಮತ್ತು ಉದಾಂಪುರ್ನಲ್ಲಿ ಮೊಬೈಲ್, ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಸೇವೆ ನಿಷೇಧ ಹಿಂತೆಗೆದುಕೊಳ್ಳಲಾಗಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಬಿ. ವಿ. ಆರ್ ಸುಬ್ರಹ್ಮಣ್ಯಂ ಅವರು ಸುದ್ದಿಗೋಷ್ಠಿ ನಡೆಸಿ, ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಾಜರಾತಿಯ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ. ಆಗಸ್ಟ್ 5ರಿಂದ ಜಾರಿಯಲ್ಲಿದ ನಿರ್ಬಂಧಗಳಿಂದ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಗಾಯಗೊಂಡಂತಹ ಘಟನೆಗಳು ಸಂಭವಿಸಿಲ್ಲ ಎಂದು ಹೇಳಿದರು.
ತಿಳಿಗೊಳ್ಳುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಡೆ ತೆಗೆದುಕೊಳ್ಳುತ್ತೇವೆ. ಶಾಂತಿ ಕಾಪಾಡುವಲ್ಲಿ ಸಹಕರಿಸುತ್ತಿರುವ ಜನತೆಯ ಹಿತದೃಷ್ಟಿಯಿಂದಾಗಿ ನಾವು ಈಗ ನಿರ್ಬಂಧಗಳನ್ನು ಕ್ರಮೇಣವಾಗಿ ಸರಾಗಗೊಳಿಸುತ್ತಿದ್ದೇವೆ. ರಾಜ್ಯದ ಒಟ್ಟು 22 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ನಿರ್ಬಂಧಗಳು ಸಾಮಾನ್ಯ ರೀತಿಯಲ್ಲಿ ಮುಂದುವರಿಯುತ್ತವೆ. ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆಯ ನಿರ್ಬಂಧ ಯಥಾವತ್ತಾಗಿ ಮುಂದುವರಿಯುತ್ತದೆ ಎಂದು ಸುಬ್ರಹ್ಮಣ್ಯಂ ತಿಳಿಸಿದರು.