ನವದೆಹಲಿ: ಉದ್ಯಮಿಗಳು ಸಾಮಾನ್ಯವಾಗಿ ತಮ್ಮ ಸಲಹೆಗಾರರನ್ನಾಗಿ ಆಯಾ ಕ್ಷೇತ್ರಗಳಲ್ಲಿ ಅಪಾರವಾದ ಅನುಭವ ಹೊಂದಿರುವ ಹಿರಿಯರನ್ನು ನೇಮಕ ಮಾಡಿಕೊಂಡಿರುತ್ತಾರೆ. ಆದ್ರೆ, ಈ ವಿಚಾರದಲ್ಲಿ ದೇಶದ ಅಗ್ರ ಉದ್ಯಮಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾ ವಿಭಿನ್ನವಾಗಿ ಕಾಣುತ್ತಾರೆ. ಟಾಟಾ ಅವರು ಕೇವಲ 27 ವರ್ಷದ ಯುವಕನನ್ನು ನೇಮಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಎಂಬಿಎ ಪದವೀಧರ ಶಾಂತನು ನಾಯ್ಡು ಅತಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹುದ್ದೆಗೇರಿದ ಯುವಕ.
ಅಮೆರಿಕದಲ್ಲಿನ ಕರ್ನಲ್ ವಿವಿಯಲ್ಲಿ ವ್ಯಾಸಂಗ ಮಾಡಿರುವ ಶಾಂತನು ನಾಯ್ಡು, ಅತಿ ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿಯ ಹುದ್ದೆಯನ್ನು ಅಲಂಕರಿಸಿದ್ದಾರೆ.
ರತನ್ ಟಾಟಾಗೆ ತಮ್ಮ ಬಳಿ ಇರುವ ಹೊಸ ಹೊಸ ಐಡಿಯಾ ಹಾಗೂ ಸಲಹೆಗಳನ್ನು ನೀಡಲು ಶಾಂತನು ಅವರನ್ನು ಆಯ್ಕೆ ಮಾಡಲಾಗಿದೆ. ಟಾಟಾ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಶಾಂತನು ತಮ್ಮ ಪ್ರತಿಭೆಯಿಂದ ಟಾಟಾ ಅವರಿಗೆ ನೆಚ್ಚಿನ ಸ್ನೇಹಿತರೂ ಕೂಡ ಆಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಂತನು ನಾಯುಡು, ಇಂತಹ ಅವಕಾಶ ಜೀವನದಲ್ಲಿ ಒಂದು ಬಾರಿ ಸಿಗಬಹುದು. ಟಾಟಾರ ಜೊತೆ ಕೆಲಸ ಮಾಡೋದು ನಿಜಕ್ಕೂ ಹೆಮ್ಮೆಯ ವಿಚಾರ. ಪ್ರತಿ ದಿನ, ಪ್ರತಿ ಕ್ಷಣ ಅವರಿಂದ ಹೊಸತನವನ್ನು ಕಲಿಯಲು ಸುವರ್ಣಾವಕಾಶ ಸಿಕ್ಕಿದೆ ಎಂದಿದ್ದಾರೆ.
ಪ್ರಾಣಿಪ್ರಿಯನಾಗಿದ್ದ ಶಾಂತನು ನಾಯುಡು, ಮೊದಲು ಟಾಟಾ ಗ್ರೂಪ್‌ನಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಅಪಘಾತದಿಂದ ರಸ್ತೆಯಲ್ಲಿ ಬಿದ್ದಿದ್ದ ನಾಯಿ ಇವರ ಗಮನಕ್ಕೆ ಬಂದಿದೆ. ರಸ್ತೆಗಳಲ್ಲಿ ಪ್ರಾಣಿಗಳಿಗೆ ಅಪಘಾತವಾಗುವುದನ್ನು ತಡೆಗಟ್ಟಬೇಕು ಎಂದು ಯೋಜಿಸಿ ತನ್ನ ಸ್ನೇಹಿತರೊಂದಿಗೆ ಸೇರಿ ರೇಡಿಯಂ ಕಾಲರ್‌ಗಳನ್ನು ಅಳವಡಿಸಲು ಮುಂದಾದರು. ಈ ಬಗ್ಗೆ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಪ್ರಾಣಿ ಪ್ರಿಯರಾಗಿದ್ದ ರತನ್ ಟಾಟಾ ಅವರಿಗೆ ಪತ್ರ ಬರೆದರೆ ಇದಕ್ಕೆ ಮತ್ತಷ್ಟು ಸಹಾಯ ಸಿಗಬಹುದೆಂದು ಶಾಂತನು ಅವರ ತಂದೆ ಸೇರಿದಂತೆ ಹಲವರು ಸಲಹೆ ನೀಡಿದ್ದರು. ಅದರಂತೆ ರತನ್ ಟಾಟಾ ಅವರಿಗೆ ಪತ್ರ ಬರೆದರು. ತಕ್ಷಣಕ್ಕೆ ಉತ್ತರ ಬಂದಿರಲಿಲ್ಲ. ಆದ್ರೆ 2 ತಿಂಗಳ ನಂತರ ಟಾಟಾ ಅವರಿಂದ ಕರೆ ಬಂತು. ಈತನ ಐಡಿಯಾಗಳಿಗೆ ಮಾರುಹೋದ ಉದ್ಯಮಿ ರತನ್ ಟಾಟಾ ಅವರು ಶಾಂತನು ಅವರನ್ನು ಉನ್ನತ ಹುದ್ಧೆಗೆ ನೇಮಿಸಿಕೊಂಡಿದ್ದಾರೆ.