ರಾಜ್ಕೋಟ್(ಗುಜರಾತ್):ರಾಜ್ಕೋಟ್ ಸರ್ಕಾರಿ ಆಸ್ಪತ್ರೆಯೊಂದರಲ್ಲೇ ಕಳೆದ ಮೂರು ತಿಂಗಳ ಅವಧಿಯಲ್ಲಿ 269 ಶಿಶುಗಳು ಸಾವನ್ನಪ್ಪಿವೆ.
ಆಸ್ಪತ್ರೆ ಮುಖ್ಯಸ್ಥ ಮನೀಶ್ ಮೆಹ್ತಾ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ ತಿಂಗಳಲ್ಲಿ 87 ಶಿಶುಗಳು ಸಾವನ್ನಪ್ಪಿದ್ದರೆ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ 71 ಹಾಗೂ 111 ಶಿಶುಗಳ ಮರಣವಾಗಿದೆ. ಅದರಲ್ಲಿ ಡಿಸೆಂಬರ್ ತಿಂಗಳೊಂದರಲ್ಲೇ ಅತಿ ಹೆಚ್ಚು ಶಿಶುಗಳು ಸಾವನ್ನಪ್ಪಿವೆ.
ಈ ಬಗ್ಗೆ ಆಸ್ಪತ್ರೆ ಮುಖ್ಯಸ್ಥರಲ್ಲಿ ಕೇಳಿದರೆ, ನಮ್ಮಲ್ಲಿ ಸಮರ್ಪಕ ವೈದ್ಯಕೀಯ ಸಲಕರಣೆಗಳಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಅವರಿಗೆ ಬೇಕಾದ ವ್ಯವಸ್ಥೆಗಳಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ 500 ಹಾಸಿಗೆಗಳಿರುವ ನೂತನ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಆರಂಭಿಸಿದೆ ಎಂದು ಮೆಹ್ತಾ ಹೇಳಿದ್ದಾರೆ.
ಇನ್ನೊಂದೆಡೆ ಈ ಬಗ್ಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಬಳಿ ಮಾಧ್ಯಮದವರು ಪ್ರಶ್ನೆ ಹಾಕಿದರೆ, ತನಗೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಯಾವುದೇ ಪ್ರತಿಕ್ರಿಯೆ ನೀಡದೆ ವಿಜಯ್ ರೂಪಾಣಿ ಜಾಗ ಖಾಲಿ ಮಾಡಿದ್ದಾರೆ.