ನವದೆಹಲಿ: 12 ವರ್ಷಗಳ ಹಿಂದೆ ದೇಶದ ಜನರನ್ನೇ ಬೆಚ್ಚಿಬೀಳಿಸಿದ್ದ ಮುಂಬೈ ಭಯೋತ್ಪಾದಕ ದಾಳಿಯನ್ನು ಸ್ಮರಿಸಿ ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಭಾವನಾತ್ಮಕ ಬರಹದೊಂದಿಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:'ರತನ್ ಟಾಟಾ' ಮುಡಿಗೆ ಜಾಗತಿಕ ಪ್ರಶಸ್ತಿ ಗರಿ: ದಿಗ್ಗಜ ಉದ್ಯಮಿಗೆ 'ಗ್ಲೋಬಲ್ ಎಕ್ಸಲೆನ್ಸ್' ಅವಾರ್ಡ್!
ಮುಂಬೈನ ತಾಜ್ ಹೋಟೆಲ್ ಮೇಲೆ ಭಯಾನಕ ಭಯೋತ್ಪಾದನಾ ದಾಳಿ ನಡೆದು ಇಂದಿಗೆ 12 ವರ್ಷ ಗತಿಸಿದವು. ಆ ಕರಾಳ ಘಟನೆಯ ನೆನಪು ಮಾಡಿಕೊಂಡು ರತನ್ ಟಾಟಾ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ಈ ಭಯೋತ್ಪಾದನಾ ದಾಳಿಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ನಡೆದ ಭೀಕರ ದಾಳಿಯನ್ನು ದೇಶದ ಜನರು ಸೇರಿದಂತೆ ನಮ್ಮ ಯೋಧರು ಒಗ್ಗಟ್ಟಿನಿಂದ ಸದೆಬಡೆದಿದ್ದು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇದು ಶ್ಲಾಘಿಸಬೇಕಿರುವ ಸಂಗತಿ. ಅದನ್ನು ನಾವು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಸುತ್ತೇವೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ಟಾಟಾ ಹೇಳಿದ್ದಾರೆ.
ಶತ್ರುಗಳನ್ನು ಸಂಹಾರ ಮಾಡಿ ಮಡಿದ ನಮ್ಮ ದೈರ್ಯವಂತ ಯೋಧರ ತ್ಯಾಗವನ್ನು ಗೌರವಿಸಬೇಕು. ಆದರೆ, ವೈವಿಧ್ಯಮಯ ಜನರು ಒಟ್ಟಾಗಿ ಬಂದು ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಂದು ಮುಂಬೈ ಭಯೋತ್ಪಾದನೆ ಮತ್ತು ವಿಧ್ವಂಸಕತೆಯನ್ನು ಮಣಿಸಿದ್ದು ಸ್ಮರಣೀಯ ಎಂದಿದ್ದಾರೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ, ಬೆದರಿಕೆ ನಿಲ್ಲಿಸಿ: ನೆಟ್ಟಿಗರಲ್ಲಿ ರತನ್ ಟಾಟಾ ಮನವಿ
ದಕ್ಷಿಣ ಆಫ್ರಿಕಾದ ನಾಯಕ ದಿವಂಗತ ನೆಲ್ಸನ್ ಮಂಡೇಲಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಕೂಡ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.