ವಾಷಿಂಗ್ಟನ್ (ಅಮೆರಿಕ):2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ದೇಶ ಭ್ರಷ್ಟನಾಗಿದ್ದ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರಣೆಯನ್ನು ಅಮೆರಿಕದ ನ್ಯಾಯಾಲಯ ಫೆಬ್ರವರಿ 12ಕ್ಕೆ ನಿಗದಿ ಮಾಡಿದೆ.
ಲಾಸ್ ಏಂಜಲೀಸ್ನ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಜಾಕ್ವೆಲಿನ್ ಚೆಲೋನಿಯನ್ ಭಾರತಕ್ಕೆ ರಾಣಾ ಹಸ್ತಾಂತರ ಮಾಡುವ ವಿಚಾರವನ್ನು ಫೆಬ್ರವರಿ 12ರಂದು ಬೆಳಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಸ್ತಾಂತರ ಮಾಡಬೇಕು ಎಂಬ ಭಾರತದ ಮನವಿಗೆ ವಿರೋಧ ವ್ಯಕ್ತಪಡಿಸಲು ರಾಣಾಗೆ ಡಿಸೆಂಬರ್ 21ರವರೆಗೆ ಸಮಯವಿದೆ. ಸೆಪ್ಟೆಂಬರ್ 28ರಂದು ಅಮೆರಿಕ ಸರ್ಕಾರ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವುದನ್ನು ಬೆಂಬಲಿಸಿತ್ತು.
ರಾಣಾ ವಿರುದ್ಧ ಯುದ್ಧ ಮಾಡಲು ಪಿತೂರಿ, ಭಯೋತ್ಪಾದನೆ ಕೃತ್ಯ, ಯುದ್ಧ, ಕೊಲೆ ಆರೋಪ ಮತ್ತು ಭಯೋತ್ಪಾದಕ ಕೃತ್ಯದ ಆರೋಪಗಳನ್ನು ಹೊರಿಸಲಾಗಿದ್ದು, ವಿಚಾರಣೆ ಕೂಡಾ ನಡೆಯುತ್ತಿದೆ.
ಶಿಕಾಗೊ ಒಹಾರೆ ವಿಮಾನ ನಿಲ್ದಾಣದಲ್ಲಿ ಹೆಡ್ಲಿಯನ್ನು ಬಂಧಿಸಿದ ನಂತರ ರಾಣಾನನ್ನು 2009ರ ಅಕ್ಟೋಬರ್‌ನಲ್ಲಿ ಅಮೆರಿಕ ಪೊಲೀಸರು ಬಂಧಿಸಿದ್ದರು.