ರಾಮಗಢ(ರಾಜಸ್ಥಾನ) :ರಾಜಸ್ಥಾನದ ಸಶಸ್ತ್ರ ಪಡೆಯ 8 ಸೈನಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೈನಿಕರನ್ನೂ ಬಿಡದ ಕೊರೊನಾ ವೈರಸ್: ರಾಜಸ್ಥಾನದ 8 ಯೋಧರಿಗೆ ಸೋಂಕು
ರಾಜಸ್ಥಾನದ ಅಲ್ವಾರ್ನಲ್ಲಿ 25 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಹೆಚ್ಚಿನವರು ರಾಜಸ್ಥಾನ್ ಸಶಸ್ತ್ರ ಪಡೆಯ ಯೋಧರೇ ಆಗಿದ್ದಾರೆ. ಇವರು ಕರ್ತವ್ಯ ನಿಮಿತ್ತ ದೆಹಲಿಗೆ ನಿಯೋಜನೆಗೊಂಡು ನಂತರ ಮೀನಾಪುರ ಕೇಂದ್ರಕ್ಕೆ ವಾಪಸ್ಸಾಗಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ಅಲ್ವಾರ್ ರಾಜಸ್ಥಾನ ಸಶಸ್ತ್ರ ಪಡೆಯ ಒಂದು ಬೆಟಾಲಿಯನ್ ದೆಹಲಿಯಲ್ಲಿ ಬೀಡು ಬಿಟ್ಟಿತ್ತು. ಕರ್ತವ್ಯ ಮುಗಿಸಿದ ನಂತರ ಅಲ್ವಾರ್ ಜಿಲ್ಲೆಯಲ್ಲಿರುವ ಮೀನಾಪುರ ಕೇಂದ್ರಕ್ಕೆ ವಾಪಸ್ಸಾಗಿತ್ತು. ಇದರಲ್ಲಿ 18 ಜನರಿಗೆ ಕೆಮ್ಮು, ಶೀತ ಕಾಣಿಸಿಕೊಂಡಿದ್ದು, ಅವರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿತ್ತು. ಇದೀಗ 18 ರಲ್ಲಿ 8 ಜನ ಸೈನಿಕರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ.
ಇನ್ನೂ 6 ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಆರ್ಸಿ ಬೆಟಾಲಿಯನ್ಗೆ ಕೊರೊನಾ ವಕ್ಕರಿಸಿದ ಹಿನ್ನೆಲೆಯಲ್ಲಿ ಮೀನಾಪುರ ಕೇಂದ್ರವನ್ನು ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಒಟ್ಟಾರೆ ಅಲ್ವಾರ್ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಇದೀಗ 215 ಕ್ಕೆ ಏರಿದೆ.