ನವದೆಹಲಿ:ಜಮ್ಮುಕಾಶ್ಮೀರಕ್ಕೆ ಭಾರತೀಯ ಸಂವಿಧಾನ ನೀಡಿದ್ದ ವಿಶೇಷ ಪ್ರಾಧಾನ್ಯತೆ ರದ್ದತಿ ಬಳಿಕ ವಾಸ್ತವ ಸ್ಥಿತಿಗತಿ ಅರಿಯಲು ಜರ್ಮನಿ, ಕೆನಡಾ, ಫ್ರಾನ್ಸ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ 25 ದೇಶಗಳ ರಾಜಭಾರಿಗಳು ಶ್ರೀನಗರಕ್ಕೆ ಬಂದಿಳಿದರು. ಕಳೆದೊಂದು ತಿಂಗಳಲ್ಲಿ ಕಣಿವೆ ನಾಡಿನ ವಾಸ್ತವ ಸ್ಥಿತಿಗತಿ ತಿಳಿಯಲು ಆಗಮಿಸಿದ ವಿದೇಶಿ ರಾಯಭಾರಿಗಳ ಎರಡನೇ ತಂಡ ಇದಾಗಿದೆ.
ಶ್ರೀನಗರ ತಲುಪುವ ಮೊದಲು ಈ ನಿಯೋಗ ಉತ್ತರ ಕಾಶ್ಮೀರದ ಹಣ್ಣು ಬೆಳೆಗಾರರನ್ನು ಭೇಟಿಯಾಗಲಿದೆ. ಅದಾದ ನಂತರ ಮಾಧ್ಯಮ, ನಾಗರಿಕರು, ಜಮ್ಮು ಕಾಶ್ಮೀರದ ರಾಜಕೀಯ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಶ್ಮೀರದ ಭದ್ರತಾ ಪರಿಸ್ಥಿತಿ ಹಾಗೂ ಭಯೋತ್ಪಾದನೆ ಪ್ರಚೋದಿಸುವ ಮತ್ತು ಅದನ್ನು ಪ್ರಾಯೋಜಿಸುವಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಭೇಟಿ ನೀಡುವ ರಾಯಭಾರಿಗಳಿಗೆ ಭಾರತೀಯ ಸೇನೆ ವಿವರ ನೀಡಲಿದೆ. ರಾಯಭಾರಿಗಳ ನಿಯೋಗವು ಇಂದು ಶ್ರೀನಗರದಲ್ಲಿ ತಂಗಲಿದೆ. ನಾಳೆ (ಗುರುವಾರ) ಜಮ್ಮುವಿಗೆ ತೆರಳಲಿದ್ದು, ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮುರ್ಮು ಮತ್ತು ನಾಗರಿಕರೊಂದಿಗೆ ಮಾತುಕತೆ ನಡೆಸಲಿದೆ.