ನವದೆಹಲಿ: ನಿಜಾಮುದ್ದೀನ್ ಪ್ರದೇಶದ ಮರ್ಕಾಜ್ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 24 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 1ರಿಂದ 15ರವರೆಗೆ ತಬ್ಲೀಘಿ ಜಮಾತ್ನ ಅಂಗವಾಗಿ ನಿಜಾಮುದ್ದೀನ್ ಪ್ರದೇಶದ ಕಟ್ಟಡವೊಂದರಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ಇಂಡೋನೇಷ್ಯಾ, ಮಲೇಷಿಯಾ ಹಾಗೂ ದೇಶದ ವಿವಿಧೆಡೆಗಳಿಂದ 1,500ರಿಂದ 1,700ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ 1,033 ಮಂದಿಯನ್ನು ಇದೀಗ ಸ್ಥಳಾಂತರ ಮಾಡಲಾಗಿದೆ. 700 ಮಂದಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗಿದೆ. 334 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಎಲ್ಲರಿಗೂ ಕೂಡಾ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಜೈನ್ ಸ್ಪಷ್ಟಪಡಿಸಿದ್ದಾರೆ.
ಈ ಕಾರ್ಯಕ್ರಮ ಕಾನೂನುಬಾಹಿರವಾಗಿದ್ದು ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ವಿಪತ್ತು ಕಾಯ್ದೆ ಮತ್ತು ಸಾಂಕ್ರಾಮಿಕ ವಿಪತ್ತು ಕಾಯ್ದೆಯನ್ನು ದೆಹಲಿಯಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯಂತೆ 5 ಮಂದಿಗೂ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ ಎಂಬ ಕಾನೂನಿದೆ. ಆದರೂ ಕೂಡಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ಲೆಫ್ಟಿನೆಂಟ್ ಗವರ್ನರ್ಗೆ ಪತ್ರ ಬರೆಯಲಾಗಿದೆ ಎಂದು ಜೈನ್ ಹೇಳಿದ್ದಾರೆ.