ನವದೆಹಲಿ:ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್ಡೌನ್ ಸಡಲಿಕೆ ಮಾಡುತ್ತ ಸಾಗುತ್ತಿದ್ದಂತೆ ಅತಿ ಹೆಚ್ಚು ಕೋವಿಡ್-19 ಪ್ರಕರಣ ಕಂಡು ಬರುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 8,380 ಹೊಸ ಕೊರೊನಾ ಪ್ರಕರಣ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ಇದರ ಜತೆಗೆ 193 ಜನರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಇದೀಗ 1.88 ಲಕ್ಷ ಕೋವಿಡ್ ಪ್ರಕರಣ ಕಂಡು ಬಂದಿದ್ದು, ಜರ್ಮನಿ ಹಾಗೂ ಫ್ರಾನ್ಸ್ಗಿಂತಲೂ ಅತಿ ಹೆಚ್ಚು ಕೊರೊನಾ ಸೋಂಕಿತರು ದೇಶದಲ್ಲಿ ಸಿಕ್ಕಿದ್ದಾರೆ. ಈ ಮೂಲಕ ಅತಿ ಹೆಚ್ಚು ಪ್ರಕರಣ ಪತ್ತೆಯಾದ 7ನೇ ದೇಶವಾಗಿ ಭಾರತ ಹೊರಹೊಮ್ಮಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ ಬರೋಬ್ಬರಿ 2,940 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, ತಮಿಳುನಾಡಿನಲ್ಲಿ 938 ಹಾಗೂ ದೆಹಲಿಯಲ್ಲಿ 1,163 ಕೊರೊನಾ ಪ್ರಕರಣ ಕಾಣಿಸಿಕೊಂಡಿವೆ. ದೇಶದಲ್ಲಿ ಇಲ್ಲಿಯವರೆಗೆ ಡೆಡ್ಲಿ ವೈರಸ್ನಿಂದ 5,300 ಜನರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಹೇರಿಕೆ ಮಾಡಲಾಗಿದ್ದ ಲಾಕ್ಡೌನ್ ಇದೀಗ ಮತ್ತಷ್ಟು ಸಡಿಲಗೊಳಿಸಿರುವ ಕಾರಣ ಹೆಚ್ಚು ಹೆಚ್ಚು ಕೋವಿಡ್-19 ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಕಳೆದ ಮೂರು ದಿನಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಬೆಳಕಿಗೆ ಬಂದಿವೆ.
ಜೂನ್ 8ರಿಂದ ದೇಶದಲ್ಲಿ ಮಾಲ್, ರೆಸ್ಟೋರೆಂಟ್, ಹೋಟೆಲ್ ಓಪನ್ ಆಗುವುದರಿಂದ ಸೋಂಕು ಮತ್ತಷ್ಟು ಹಬ್ಬುವ ಸಾಧ್ಯತೆ ಇದೆ ಎನ್ನಲಾಗಿದೆ. ಜಾಗತಿಕವಾಗಿ 62.09 ಲಕ್ಷ ಪ್ರಕರಣ ಕಾಣಿಸಿಕೊಂಡಿದ್ದು, ಅಮೆರಿಕದಲ್ಲಿ 18.23 ಲಕ್ಷ, ಸ್ಪೇನ್ 2.86 ಲಕ್ಷ, ಇಟಲಿ 2.33 ಲಕ್ಷ, ಬ್ರಿಟನ್ 2.74 ಲಕ್ಷ, ರಷ್ಯಾ 4.05ಲಕ್ಷ ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.