ನವದೆಹಲಿ: ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಮೊದಲ ಹಂತದ ಲೋಕಸಭೆ ಚುನಾವಣೆಗೆ ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 213 ಮಂದಿ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಇದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ನ್ಯಾಷನಲ್ ಎಲೆಕ್ಷನ್ ವಾಚ್ ಅಂಡ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಈ ಬಗ್ಗೆ ವರದಿ ನೀಡಿದ್ದು, ಇದರಲ್ಲಿ ಕೆಲವರ ಮೇಲೆ ಕೊಲೆ, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅಪಹರಣದಂತಹ ಗಂಭೀರ ಪ್ರಕರಣಗಳನ್ನ ಎದುರಿಸುತ್ತಿದ್ದಾರೆ.
ಸದ್ಯ ಸಲ್ಲಿಕೆಯಾಗಿರುವ 1279 ಅಭ್ಯರ್ಥಿಗಳ ಅಫಿಡವಿಟ್ಗಳಲ್ಲಿ 1266 ಅಫಿಡವಿಟ್ಗಳನ್ನು ಪರಿಶೀಲಿಸಿ ಸಂಸ್ಥೆ ಈ ವರದಿ ನೀಡಿದೆ. ಉಳಿದ 13 ಅಫಿಡವಿಟ್ಗಳಲ್ಲಿ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದೆ. ಇಷ್ಟು ಮಂದಿಯಲ್ಲಿ ಶೇ.12ರಷ್ಟು ಅಭ್ಯರ್ಥಿಗಳು ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಶೇ12ರಷ್ಟು ಅಭ್ಯರ್ಥಿಗಳು ಅಪರಾಧಿಗಳು ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ, 10 ಅಭ್ಯರ್ಥಿಗಳ ಕೊಲೆ ಆರೋಪ ಹೊತ್ತಿದ್ದಾರೆ.