ಅಮ್ಸ್ಟರ್ಡ್ಯಾಂ (ನೆದರ್ಲ್ಯಾಂಡ್): ಕೊರೊನಾ ವಿರುದ್ಧ ಹೋರಾಡಲು ಭಾರತ 21 ದಿನಗಳ ಲಾಕ್ಡೌನ್ ಘೋಷಣೆ ಮಾಡಿರುವುದು ನಿರ್ಣಾಯಕ ಹಾಗೂ ಸರಿಯಾದ ನಿರ್ಧಾರ ಎಂದು ಯೂರೋಪಿಯನ್ ಥಿಂಕ್ ಟ್ಯಾಂಕ್ ಅಭಿಪ್ರಾಯಪಟ್ಟಿದೆ.
ಅಮ್ಸ್ಟರ್ಡ್ಯಾಂ ಮೂಲದ ಥಿಂಕ್ ಟ್ಯಾಂಕ್ ಎನ್ನಿಸಿಕೊಂಡಿರುವ ಯೂರೋಪಿಯನ್ ಫೌಂಡೇಷನ್ ಆಫ್ ಸೌಥ್ ಏಷ್ಯನ್ ಸ್ಟಡೀಸ್ ''ಭಾರತದಲ್ಲಿರುವ 1.3 ಬಿಲಿಯನ್ ಜನಸಂಖ್ಯೆಗೆ ಲಾಕ್ ಡೌನ್ ಸುಲಭವಾಗಿರುವುದಿಲ್ಲ. ಇಲ್ಲಿನ ಜನರಿಗೆ ಸಾಮಾಜಿಕ ಅಂತರ ವಿಚಿತ್ರ ಅನ್ನಿಸುವುದರ ಜೊತೆಗೆ ಯಶಸ್ವಿಯಾಗುವುದು ಸುಲಭವಾಗಿರುವುದಿಲ್ಲ'' ಎಂದಿದೆ.
ಯೂರೋಪಿಯನ್ ಫೌಂಡೇಷನ್ ಆಫ್ ಸೌಥ್ ಏಷ್ಯನ್ ಸ್ಟಡೀಸ್ನ ಡೈರೆಕ್ಟರ್ ಜುನೈದ್ ಖುರೇಷಿ '' ಕೊರೊನಾ ಮಹಾಮಾರಿ ವಿರುದ್ಧ ಭಾರತ ಸರ್ಕಾರ ಬೇಗನೇ ಎಚ್ಚೆತ್ತುಕೊಂಡಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ದಕ್ಷಿಣ ಏಷ್ಯಾದ ಈ ರಾಷ್ಟ್ರಗಳಲ್ಲಿ ವೇಗ ಕೊರೊನಾ ಹಬ್ಬುತ್ತಿದ್ದು, ಈ ಬಗ್ಗೆ ಎಚ್ಚರವಾಗಿರಬೇಕು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು'' ಎಂದು ಎಚ್ಚರಿಸಿದ್ದಾರೆ.
ಪ್ರಧಾನಿ ಮೋದಿ ಕೊರೊನಾ ಹರಡದಂತೆ ತೆಗೆದುಕೊಂಡಿರುವ ಕ್ರಮಗಳು ಸ್ವಾಗತಾರ್ಹವಾದರೂ, ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದಿರುವ ಜುನೈದ್ ಈ ನಿರ್ಧಾರ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಲಾಕ್ಡೌನ್ ಅನ್ನು ನಿಭಾಯಿಸುವ ಸಲುವಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಬಗ್ಗೆ ಜುನೈದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷದ ಸನಿಹದಲ್ಲಿದ್ದಾಗ, ಇಟಲಿಯಲ್ಲಿ ಸುಮಾರು ಲಕ್ಷ ಮಂದಿಗೆ ಸೋಂಕು ಹರಡಿತ್ತು. ಇದೇ ವೇಳೆ ಭಾರತದಲ್ಲಿ ಸಾವಿರ ಮಂದಿಗೆ ಮಾತ್ರ ಸೋಂಕು ಹರಡಿತ್ತು ಎಂಬುದನ್ನು ಯುರೋಪಿಯನ್ ಥಿಂಕ್ ಟ್ಯಾಂಕ್ ಉಲ್ಲೇಖಿಸಿದೆ.