ನವದೆಹಲಿ:ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ವಿನಯ್ ಜೈಲಿನ ಕೋಣೆಯ ಗೋಡೆಗೆ ತಲೆ ಚಚ್ಚಿಕೊಂಡು ಗಾಯಗೊಂಡಿದ್ದಾನೆ.
ಫೆಬ್ರವರಿ 16ರಂದು ವಿನಯ್ ತಿಹಾರ್ ಜೈಲಿನಲ್ಲಿ ತಾನಿದ್ದ ಕೋಣೆಯ ಗೋಡೆಗೆ ತಲೆ ಬಡಿದುಕೊಂಡು ಗಾಯಗೊಂಡಿದ್ದಾನೆ, ಆತನ ತಲೆಗೆ ಸಣ್ಣ ಗಾಯವಾಗಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2012ರ ಡಿಸೆಂಬರ್ನಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್ ತೀರ್ಪು ಹೊರಡಿಸಿತ್ತು. ನಂತರ ಫೆಬ್ರವರಿ 1ಕ್ಕೆ ಹೊಸ ದಿನಾಂಕ ನಿಗದಿಪಡಿಸಲಾಗಿತ್ತು.
ಇದಾದ ಬಳಿಕ ಫೆ.1ರಂದು ನಿಗದಿಯಾಗಿದ್ದ ಗಲ್ಲು ಶಿಕ್ಷೆಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಫೆ.17ರಂದು ಪಟಿಯಾಲ ಹೌಸ್ ಕೋರ್ಟ್, ಮಾರ್ಚ್ 3ಕ್ಕೆ ಹೊಸದಾಗಿ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ.