ಹೈದರಾಬಾದ್: ಫೇಸ್ಬುಕ್ ಮೂಲಕ ಪರಿಚಯವಾದ ಪಾಕ್ನ ಯುವತಿ ಭೇಟಿ ಮಾಡಲು ತೆರಳುತ್ತಿದ್ದ ಯುವಕನೋರ್ವ ಗುಜರಾತ್ನ ಕಚ್ ಪ್ರದೇಶದಲ್ಲಿ ಬಿಎಸ್ಎಫ್ ಯೋಧರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
20 ವರ್ಷದ ಸಿದ್ಧಿಕಿ ಮೊಹಮ್ಮದ್ ಜಿಸಾನ್ ಮೂಲತಃ ಮಹಾರಾಷ್ಟ್ರದ ಉಸ್ಮಾನಾಬಾದ್ನವನಾಗಿದ್ದು, ಫೇಸ್ಬುಕ್ ಮೂಲಕ ಪಾಕಿಸ್ತಾನದ ಹುಡುಗಿ ಜತೆ ಪರಿಚಯವಾಗಿದೆ. ಆಕೆಯೊಂದಿಗೆ ವಾಟ್ಸ್ಆ್ಯಪ್ನಲ್ಲಿ ಪ್ರತಿದಿನ ಚಾಟ್ ಮಾಡಲು ಶುರು ಮಾಡಿದ್ದಾನೆ. ಇದಾದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ಗೂಗಲ್ ಮ್ಯಾಪ್ ಮೂಲಕ ಪಾಕ್ಗೆ ತೆರಳಲು ನಿರ್ಧರಿಸಿ ಮಹಾರಾಷ್ಟ್ರ ಬಿಟ್ಟಿರುವ ಯುವಕ, ಗುಜರಾತ್ನ ಕಚ್ನ ರಣ್ ಪ್ರದೇಶದಲ್ಲಿ ಬಾರ್ಡರ್ ಕ್ರಾಸ್ ಮಾಡ್ತಿದ್ದ ವೇಳೆ ಬಿಎಸ್ಎಫ್ ಯೋಧರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಸಂಪೂರ್ಣವಾದ ಮಾಹಿತಿ ನೀಡಿರುವ ಯುವಕ 1200 ಕಿಲೋ ಮೀಟರ್ ಪ್ರಯಾಣ ಮಾಡುವ ಯೋಜನೆ ರೂಪಿಸಿಕೊಂಡಿದ್ದಾಗಿ ತಿಳಿಸಿದ್ದಾನೆ. ಈ ವೇಳೆ ಯುವಕನಿಂದ ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆ ವಶಪಡಿಸಿಕೊಳ್ಳಲಾಗಿದೆ.
ಗಡಿಯವರೆಗೆ ಬೈಕ್ನಲ್ಲಿ ಪ್ರಯಾಣ ಮಾಡಿರುವ ಯುವಕ, ಯಾರಿಗೂ ಗೊತ್ತಾಗದಂತೆ ಅದನ್ನ ಮುಚ್ಚಿಟ್ಟಿದ್ದಾನೆ. ಪಾಕ್ ಬಾರ್ಡರ್ ದಾಟಲು ಕೇವಲ 1.5 ಕಿಲೋ ಮೀಟರ್ ದೂರದಲ್ಲಿದ್ದಾಗ ಬಂಧನಕ್ಕೊಳಗಾಗಿದ್ದಾನೆ. ಯುವಕ ನಾಪತ್ತೆಯಾಗಿರುವ ಕುರಿತು ಮಹಾರಾಷ್ಟ್ರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲು ಮಾಡಿದ್ದು, ಗುಜರಾತ್ ಪೊಲೀಸರು ಈಗಾಗಲೇ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.
ಶಾ ಫೈಸಲ್ ಎಂಬಾಕೆ ಪಾಕಿಸ್ತಾನದ ಕರಾಚಿಯಲ್ಲಿ ವಾಸವಿದ್ದು, ಭೇಟಿ ಮಾಡಲು ಬರುವಂತೆ ತಿಳಿಸಿದ್ದಳು ಎಂದು ತಿಳಿದು ಬಂದಿದೆ.