ಕನ್ಯಾಕುಮಾರಿ(ತಮಿಳುನಾಡು):ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದ ಜೋಡಿ ಕುಟುಂಬಸ್ಥರ ವಿರೋಧಕ್ಕೆ ಹೆದರಿ ಮನೆಯಿಂದ ಓಡಿ ಹೋಗಿ ಮದುವೆ ಮಾಡಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಪಬ್ಜಿ ಜೋಡಿ ಪರಸ್ಪರ ಮದುವೆ ಮಾಡಿಕೊಂಡಿದ್ದಾರೆ.
ಪಬ್ಜೀ ಗೆಳೆಯನೊಂದಿಗೆ ಓಡಿ ಹೋದ ಗೆಳತಿ 20 ವರ್ಷದ ಯುವತಿ ಬಬಿಶಾ ತಮ್ಮ ಮನೆಯಿಂದ ಓಡಿ ಹೋಗಿ ಪಬ್ಜಿ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್ನಿಂದ ಲಾಕ್ಡೌನ್ ಹೇರಲಾಗಿದ್ದ ಸಂದರ್ಭದಲ್ಲಿ 20 ವರ್ಷದ ಯುವತಿ ಬಬಿಶಾ 24 ವರ್ಷದ ಅಜಿನ್ ಪ್ರಿನ್ಸ್ ಪಬ್ಜಿ ಆಡುತ್ತಾ ಪರಿಚಯವಾಗಿದ್ದಾರೆ.
ಬಬಿಶಾ ಕನ್ಯಾಕುಮಾರಿಯವಳಾಗಿದ್ದು, ಅಜಿನ್ ಪ್ರಿನ್ಸ್ ತಿರುವರೂರು ಜಿಲ್ಲೆಯವನಾಗಿದ್ದನು. ಆರಂಭದಲ್ಲಿ ಕೇವಲ ಪಬ್ಜಿ ಗೇಮ್ಗೆ ಸಿಮೀತವಾಗಿದ್ದ ಇವರ ಸ್ನೇಹ ತದನಂತರ ಪ್ರೀತಿಯಾಗಿ ಬದಲಾಗಿದೆ. ಹೀಗಾಗಿ ಸೆಪ್ಟೆಂಬರ್ 19ರಂದು ಬಬಿಶಾ- ಅಜಿನ್ ಮನೆಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಾರೆ. ಇದೀಗ ಬಬಿಶಾ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಇನ್ನು ಮದುವೆ ಮಾಡಿಕೊಂಡಿರುವ ಜೋಡಿ ಈಗಾಗಲೇ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಬಬಿಶಾ ತಿಳಿಸಿರುವ ಪ್ರಕಾರ ತಮ್ಮ ಪ್ರೀತಿಯನ್ನ ಒಪ್ಪಿಕೊಳ್ಳಲು ಪೋಷಕರು ಹಿಂಜರಿಯುತ್ತಿರುವ ಕಾರಣ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಇನ್ನು ಪೊಲೀಸರ ಉಪಸ್ಥಿತಿಯಲ್ಲೇ ಹತ್ತಿರದ ದೇವಾಲಯದ ಮುಂದೆ ಮದುವೆ ಮಾಡಿಕೊಂಡಿದ್ದಾರೆ.