ಕರ್ನಾಟಕ

karnataka

By

Published : Apr 26, 2020, 8:59 PM IST

ETV Bharat / bharat

ಲಾಕ್​ಡೌನ್​ ನಡುವೆಯೂ ಹಾಲಿನ ಉತ್ಪನ್ನಗಳಿಗೆ ಶೇ.20ರಷ್ಟು ಹೆಚ್ಚುವರಿ ಬೇಡಿಕೆ

ಈಟಿವಿ ಭಾರತ್​​​​ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅಮುಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಪನಿಯು ಎದುರಿಸುತ್ತಿರುವ ವಿವಿಧ ಸವಾಲುಗಳು ಮತ್ತು ಅದನ್ನು ನಿವಾರಿಸಲು ಕಂಪನಿ ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ತಿಳಿಸಿದ್ದಾರೆ.

Amul MD RS Sodhi
ಈಟಿವಿ ಭಾರತ್‌ ಜೊತೆ ಅಮುಲ್‌ ಮುಖ್ಯಸ್ಥನ ಮಾತು

ಹೈದರಾಬಾದ್‌:ಕೋವಿಡ್‌-19 ಭಾರತೀಯ ಉದ್ಯಮದ ನರಮಂಡಲವನ್ನೇ ಪರೀಕ್ಷಿಸುತ್ತಿದೆ. ಪೂರೈಕೆ ಜಾಲದ ಕೊರತೆಯ ನಡುವೆಯೂ, ಮಾರುಕಟ್ಟೆ ಬೇಡಿಕೆ ಇರುವ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಲಕ್ಷಾಂತರ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಜೀವಿಸುತ್ತಿವೆ. ಈ ಪೈಕಿ ಅಮುಲ್ ಕಂಪನಿ ಕೂಡ ಒಂದು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಪನಿಯು ಎದುರಿಸುತ್ತಿರುವ ವಿವಿಧ ಸವಾಲುಗಳು ಮತ್ತು ಅದನ್ನು ನಿವಾರಿಸಲು ಕಂಪನಿ ಹೇಗೆ ಪ್ರಯತ್ನಿಸುತ್ತಿದೆ ಎಂಬುದರ ಕುರಿತು ಅಮುಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಈಟಿವಿ ಭಾರತ್‌ ಜೊತೆ ಮಾತನಾಡಿದ್ದಾರೆ.

ಶೇ.15ರಷ್ಟು ಹೆಚ್ಚು ಹಾಲು ಸಂಗ್ರಹವಾಗುತ್ತಿದೆ:

ನಮ್ಮ ವ್ಯವಹಾರವು ಪ್ರತಿದಿನ 36 ಲಕ್ಷ ರೈತರಿಂದ (ದಿನಕ್ಕೆ ಎರಡು ಬಾರಿ) ಸಂಗ್ರಹಿಸುತ್ತಿರುವ ಹಾಲಿನ ಮೇಲೆ ಅವಲಂಬಿತವಾಗಿದ್ದು, ರೈತರು ಮೊದಲಿಗಿಂತ ಶೇ.15 ರಷ್ಟು ಹೆಚ್ಚಿನ ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಸಣ್ಣ ವ್ಯಾಪಾರಿಗಳು ಅಂದರೆ ಸಣ್ಣ ಮಿಠಾಯಿ ಅಂಗಡಿ ಜನರು ಅಥವಾ ಸಣ್ಣ ಐಸ್ ಕ್ರೀಮ್ ತಯಾರಕರು ಅಥವಾ ಸಣ್ಣ ಡೈರಿ ಮಾಲೀಕರು, ಗುಜರಾತ್ ಅಥವಾ ಗುಜರಾತ್ ಹೊರಗಿನ ರೈತರಿಂದ ಹಾಲು ಸಂಗ್ರಹಿಸುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ರೈತರು ಹೆಚ್ಚು ಹಾಲು ನೀಡುತ್ತಿದ್ದಾರೆ ಎಂದು ಸೋಧಿ ವಿವರಿಸುತ್ತಾರೆ.

ಉದ್ಯೋಗಿಗಳ ಸುರಕ್ಷತೆಯೇ ನಮ್ಮ ಆದ್ಯತೆ:

ಮೊದಲು ನಮ್ಮ ಸಿಬ್ಬಂದಿ ಸುರಕ್ಷತೆ ಬಹಳ ಮುಖ್ಯವಾಗುತ್ತದೆ. ನಮ್ಮ ಕಂಪನಿ ಉದ್ಯೋಗಿಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕಂಪನಿಯಿಂದ ಹಲವಾರು ಮಾನದಂಡಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಈ ಸುರಕ್ಷತಾ ಕ್ರಮಗಳು ಅಥವಾ ಮಾರ್ಗಸೂಚಿಗಳನ್ನು ಲಾಕ್‌ಡೌನ್ ಘೋಷಣೆಯಾಗುವ 8 ದಿನಗಳ ಮೊದಲು ಅಂದರೆ, ಮಾರ್ಚ್ 17 ರಿಂದ ನಾವು ಜಾರಿಗೆ ತಂದಿದ್ದೇವೆ. ಗುಜರಾತ್ ಮತ್ತು ಗುಜರಾತ್‌ನ ಹೊರಗಿನ ನಮ್ಮ ಎಲ್ಲಾ 18,500 ಸಂಗ್ರಹ ಕೇಂದ್ರಗಳಲ್ಲಿ ನಾವು ನಮ್ಮ ಎಲ್ಲ ರೈತರಿಗೆ ಅಥವಾ ಸದಸ್ಯರಿಗೆ ಅವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ದೊಡ್ಡ ಬ್ಯಾನರ್ ಹಾಕಿದ್ದೇವೆ ಎಂದರು.

ದೆಹಲಿ, ಮುಂಬೈ ಮತ್ತು ಕೋಲ್ಕತಾಗಳಲ್ಲಿ ಕಾರ್ಮಿಕರ ಕೊರತೆ:

ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಕಾರ್ಮಿಕರ ಕೊರತೆ ಅತ್ಯಂತದ ದೊಡ್ಡ ಸವಾಲಾಗಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತಾ, ಕಾನ್ಪುರ ಮತ್ತು ಲಖನೌಗಳಲ್ಲಿ ಕಾರ್ಮಿಕರ ಕೊರತೆ ಎದುರಿಸುತ್ತಿದ್ದೇವೆ ಎಂದು ಸೋಧಿ ಹೇಳುತ್ತಾರೆ.

ಜನರು ಮನೆಯಲ್ಲಿಯೇ ಇರುವುದರಿಂದ ತಿಂಡಿ-ತಿನಿಸುಗಳನ್ನು ಮಾಡುವುದು ಹೆಚ್ಚಾಗಿದೆ:

ಕೊರೊನಾ ತಂದಿಟ್ಟ ಪರಿಸ್ಥಿತಿಯ ಆರಂಭದಲ್ಲಿ ನಮ್ಮ ಹಾಲು ಮಾರಾಟ ಶೇ.30 ರಷ್ಟು ಕುಸಿಯಿತು. ಇದಕ್ಕೆ ಕಾರಣ ನಮ್ಮ ಹಾಲು ಹಾಗೂ ಉತ್ಪನ್ನಗಳ ಶೇ.15 ರಷ್ಟು ಬಳಕೆ ಹೊಂದಿರುವ ಹೋಟೆಲ್‌, ರೆಸ್ಟೋರೆಂಟ್‌ಗಳು ಮತ್ತು ಮಕ್ಕಳ ತಿಂಡಿ-ತಿನಿಸುಗಳ ಅಂಗಡಿಗಳನ್ನು ಕೊರೊನಾ ಭೀತಿಗೆ ಮುಚ್ಚಲಾಯಿತು. ಇದರಿಂದ ಹಾಲು ಮಾರಾಟ ಶೇ.7-8 ರಷ್ಟು ಕುಸಿದಿದೆ. ಆದರೆ ಇದರ ಹೊರತಾಗಿ ನಮ್ಮ ಹಾಲಿನ ಇತರ ಉತ್ಪನ್ನಗಳಿಗೆ ಶೇಕಡಾ 20 ರಷ್ಟು ಬೇಡಿಕೆ ಹೆಚ್ಚಾಗಿದೆ. ಲಾಕ್​ಡೌನ್​ನಿಂದಾಗಿ ಜನರು ಮನೆಯಲ್ಲಿಯೇ ಇರುವುದರಿಂದ ವಿಧವಿಧದ ಅಡುಗೆ ಮಾಡುತ್ತಿದ್ದು, ತುಪ್ಪ, ಬೆಣ್ಣೆ, ಚೀಸ್, ಪನೀರ್​ಗಳನ್ನು ಹೆಚ್ಚು ಬಳಸುತ್ತಿರುವುದು ಇದಕ್ಕೆ ಕಾರಣ ಎಂದು ಸೋಧಿ ತಿಳಿಸುತ್ತಾರೆ.

ಶೇ.30-40 ರಷ್ಟು ಆನ್‌ಲೈನ್‌ ಮಾರಾಟದಲ್ಲಿ ಏರಿಕೆ:

ಲಾಕ್​ಡೌನ್​ನ ಆರಂಭದಲ್ಲಿ ಆನ್‌ಲೈನ್ ಮಾರಾಟಕ್ಕೆ ಅಥವಾ ಫುಡ್​ ಡೆಲಿವರಿ ಮಾಡಲು ಅವಕಾಶ ಇರಲಿಲ್ಲ. ಆದರೆ ಬಳಿಕ ಆಹಾರ ಪದಾರ್ಥಗಳ ಆನ್‌ಲೈನ್ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಮೊದಲಿಗಿಂತಲೂ ಶೇ.30-40ರಷ್ಟು ನಮ್ಮ ಉತ್ಪನ್ನಗಳಿಗೆ, ಅದರಲ್ಲೂ ಹಾಲಿಗೆ ಆನ್​ಲೈನ್​ನಲ್ಲಿ ಆರ್ಡರ್​​ ಬರಲಾರಂಭಿಸಿದೆ. ಇನ್ನು ನಮಗೆ ಹಾಲಿನ ಸಂಗ್ರಹಣೆ ಅಥವಾ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಏಕೆಂದರೆ ಇತ್ತ ನಮ್ಮ ರೈತರು ನೀಡುವ ಹಾಲಿಗೆ ಉತ್ತಮ ಬೆಲೆ ನೀಡುತ್ತೇವೆ, ಅತ್ತ ಗ್ರಾಹಕರಿಗೂ ಸರಿಯಾದ ಬೆಲೆಗೆ ಮಾರಾಟ ಮಾಡುತ್ತೇವೆ.

ಈ ಸಂಕಷ್ಟದ ಸ್ಥಿತಿಯಲ್ಲಿ ತಂತ್ರಜ್ಞಾನ ಸಾಕಷ್ಟು ಸಹಾಯ ಮಾಡಿದೆ:

90ರ ದಶಕದ ಕರ್ಫ್ಯೂಗಳಿಗೆ ಹೋಲಿಕೆ ಮಾಡಿದರೆ 2020ರ ಲಾಕ್‌ಡೌನ್‌ ಅಷ್ಟೊಂದು ಕಷ್ಟಕರವಾಗಿಲ್ಲ. ಈಗ ಕಂಪನಿಗೆ ಬರುವ ಸಿಬ್ಬಂದಿ‘ ಸಂಖ್ಯೆ ಕಡಿಮೆಯಿದ್ದರೂ ತಂತ್ರಜ್ಞಾನದ ಸಹಾಯದಿಂದ ಕೆಲಸ ನಡೆಯುತ್ತಿದೆ. ಕಂಪನಿಯ ಕೆಲವೊಂದು ಕೆಲಸಗಳು ವರ್ಕ್​ ಫ್ರಂ ಹೋಮ್​ ಮೂಲಕ ನಡೆಯುತ್ತಿದೆ. ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಲು ಯಾವ ತೊಂದರೆಯೂ ಇಲ್ಲ ಎನ್ನುತ್ತಾರೆ ಸೋಧಿ.

ಲಾಕ್‌ಡೌನ್‌ ಮುಗಿದ ಬಳಿಕ ಫುಡ್​ ಕಂಪನಿಗಳಿಗಿರುವ ಸವಾಲುಗಳು:

ಲಾಕ್‌ಡೌನ್‌ ಮುಗಿದ ಬಳಿಕ ಫುಡ್​ ಕಂಪನಿಗಳಿಗೆ ಅನೇಕ ಸವಾಲುಗಳು ಎದುರಾಗಲಿವೆ. ಲಾಕ್​​ಡೌನ್​ ವೇಳೆಯಲ್ಲಿ ಗ್ರಾಹಕರು ಸಾಕಷ್ಟು ಖರೀದಿಸಿದ್ದಾರೆ. ಹೀಗಾಗಿ ಕಂಪನಿಗಳ ಬಳಿ ಕೂಡ ಕೆಲವು ಉತ್ಪನ್ನಗಳ ಸಂಗ್ರಹ ಖಾಲಿಯಾಗಿರಬಹುದು. ಹಾಗೂ ಗ್ರಾಹಕರು ಹೆಚ್ಚು ಅಗತ್ಯ ಉತ್ಪನ್ನಗಳ ಮೊರೆ ಹೋಗುತ್ತಾರೆ, ಉತ್ತಮ ಬೆಲೆಗೆ ಆರೋಗ್ಯಕರ ಪದಾರ್ಥಗಳನ್ನು ಪಡೆಯುವ ಪ್ರಜ್ಞೆ ಮತ್ತು ನಿರೀಕ್ಷೆ ಹೊಂದಿರುತ್ತಾರೆ. ಇಂಥಹ ಸಮಯದಲ್ಲಿ ತಯಾರಕರು ಈ ನಿರೀಕ್ಷೆಗಳನ್ನು ಹೇಗೆ ಪೂರೈಸಬೇಕು ಎಂಬುದನ್ನು ಅರಿತಿರಬೇಕು ಎಂದು ಸೋಧಿ ಸಲಹೆ ನೀಡುತ್ತಾರೆ.

ABOUT THE AUTHOR

...view details