ಕೋಲ್ಕತ್ತಾ:ಯಶಸ್ಸಿನ ಕೊನೆಯ ಕ್ಷಣದಲ್ಲಿವಿಫಲಗೊಂಡ ಚಂದ್ರಯಾನ- 2 ಯೋಜನೆಯನ್ನೇ ಮುಂದುವರಿಸಿ ಗೆಲುವು ಸಾಧಿಸುವುದಕ್ಕಾಗಿ ಚಂದ್ರಯಾನ-3 ಯೋಜನೆಯಲ್ಲಿ ವಿಶೇಷ ತಂತ್ರಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಲದ ಜಾದವ್ಪುರ್ ವಿಶ್ವವಿದ್ಯಾಲಯದ ಇಬ್ಬರು ಸಂಶೋಧಕರು ಇಸ್ರೋದ ಮೂನ್ ಸಾಫ್ಟ್ ಲ್ಯಾಂಡಿಂಗ್ ಯೋಜನೆಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ.
ವಿಜ್ಞಾನಿಗಳಲ್ಲಿ ಸೋಲು ಮೆಟ್ಟಿ ನಿಲ್ಲುವ ತವಕ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ -3 ಮಿಷನ್ನ ಮಹತ್ವಾಕಾಂಕ್ಷೆಯ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಲ್ಯಾಂಡರ್ ರೋವರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಮೃದುವಾಗಿ ಇರಿಸುವ ಗುರಿ ಹೊಂದಿತ್ತು. ಈ ಪ್ರದೇಶವನ್ನು ತಲುಪಲು ಇದುವರೆಗೂ ಯಾವ ರಾಷ್ಟ್ರಗಳಿಗೂ ಸಾಧ್ಯವಾಗಿಲ್ಲ. ಇಂತಹ ಕಠಿಣ ಹಾಗೂ ಬಹು ಸವಾಲಿನ ಯೋಜನೆಗೆ ಇಸ್ರೋ ವಿಜ್ಞಾನಿಗಳು ಕೈಹಾಕಿದ್ದಾರೆ. ಆದರೆ, ಚಂದ್ರಯಾನ-2 ಯೋಜನೆಯು ಅಂತಿಮ ಹಂತದಲ್ಲಿ ವಿಫಲವಾಯಿತು.
ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಯಲ್ಲಿ ವಿಜ್ಞಾನಿಗಳು (ಸಂಗ್ರಹ ಚಿತ್ರ) ಚಂದ್ರನ ಮೇಲೆ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ಯೋಜನೆಗಾಗಿ ಜಾಧವ್‌ಪುರ ವಿಶ್ವವಿದ್ಯಾಲಯದ ಇಬ್ಬರು ಸಂಶೋಧಕರಾದ ಸಯಾನ್ ಚಟರ್ಜಿ ಮತ್ತು ಡಾ. ಅಮಿತವ್ ಗುಪ್ತಾ ಅವರು ಇಸ್ರೋ ಜೊತೆ ಸೇರಿ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ವರದಿಯ ಪ್ರಕಾರ, ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದ ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಬಾಹ್ಯಾಕಾಶ ಏಜೆನ್ಸಿಯ ‘ರೆಸ್ಪಾಂಡ್ ಪ್ರೋಗ್ರಾಮ್’ನ ಒಂದು ಭಾಗವಾಗಿದೆ.
ಸಿಮ್ಯುಲೇಷನ್ ಆಧಾರಿತ ಮಾದರಿಯು ಲ್ಯಾಂಡರ್ ಚಂದ್ರನ ಮೇಲ್ಮೈ ಸ್ಪರ್ಶಿಸುವಾಗ ಕ್ರಮೇಣ ಸುರುಳಿ ಆಕಾರದ ಮೂಲವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಅದು ತಕ್ಷಣ ಕ್ರ್ಯಾಶ್ ಆಗಿ ಲ್ಯಾಂಡ್ ಆಗುವುದಿಲ್ಲ. ಬದಲಿಗೆ ಗರಿಗಳಂತಾಗಿ ನೆಲ ಮುಟ್ಟುತ್ತದೆ. ಅದರ ಲ್ಯಾಂಡಿಂಗ್ ಸ್ಥಳದಲ್ಲಿ ಬಂಡೆ ಅಥವಾ ಬಂಡೆಯಂತಹ ವಸ್ತು ಇದ್ದರೆ ಕೋನೀಯ ನೋಟ ಪಡೆದು, ಟರ್ಮಿನಲ್ ಹಂತದಲ್ಲಿ ಲ್ಯಾಂಡರ್ ಸ್ಪರ್ಶಿಸಿದಾಗ ಸುರುಳಿ ಆಕಾರ ಆಗುವಂತೆ ಯೋಜಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ಅಸೋಸಿಯೇಟ್ ಪ್ರೊಫೆಸರ್/ ಪ್ರಾಜೆಕ್ಟ್ನ ಸಹ ತನಿಖಾಧಿಕಾರಿ ಸಯಾನ್ ಚಟರ್ಜಿ ವಿವರಿಸುತ್ತಾರೆ.
ಚಂದ್ರಯಾನ-2 ವಿಫಲವಾದ ಸಂದರ್ಭದಲ್ಲಿ ಇಸ್ರೋ ಮುಖ್ಯಸ್ಥ ಶಿವನ್ ಅವರನ್ನು ಬಿಗಿದಪ್ಪಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ ನಾವು ನಮ್ಮ ಅಂಕಿಅಂಶಗಳ ಆಧಾರದ ಮೇಲೆ ವಿನ್ಯಾಸ ಮತ್ತು ಸಿಮ್ಯುಲೇಷನ್ ಭಾಗವನ್ನು ಮಾಡುತ್ತಿದ್ದೇವೆ. ನಿಗದಿತ ಗುರಿಯ ಕೋನೀಯ ನೋಟ ಪಡೆದ ಬಳಿಕ, ಹಾರುವಾಗ ಬೇಟೆಯನ್ನು ಹಿಡಿಯುವ ಗಾಳಿಪಟದ ಉದಾಹರಣೆಯನ್ನು ನಾವು ನೀಡಬಹುದು. ಡಿಸೈನಿಂಗ್ ಭಾಗ ಪೂರ್ಣಗೊಂಡ ನಂತರ, ಇಸ್ರೋ ಫ್ಯಾಬ್ರಿಕೇಷನ್ ಕೈಗೆತ್ತಿಕೊಳ್ಳಲಿದೆ ಎಂದು ಚಟರ್ಜಿ ತಿಳಿಸಿದರು.
ಲ್ಯಾಂಡರ್‌ನ ಸರಿಯಾದ ಇಳಿಯುವಿಕೆಯನ್ನು ಸಂಶೋಧನಾ ತಂಡವು ಗಣನೆಗೆ ತೆಗೆದುಕೊಳ್ಳುತ್ತದೆ. ಅದು ಹೇಗೆ ಚಲಿಸುತ್ತದೆ, ಹೇಗೆ ತಿರುಗುತ್ತದೆ, ಗುರುತ್ವಾಕರ್ಷಣೆಯಿಂದ ಇಳಿಯುವಾಗ ಅದು ಇದ್ದಕ್ಕಿದ್ದಂತೆ ವೇಗ ಪಡೆಯುವ ಬಗೆ ಹೇಗೆ? ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ.
ವಿಕ್ರಮ್ ಲ್ಯಾಂಡ್ ರೋವರ್ ಚಂದ್ರನ ಮೇಲ್ಮೈ ಸ್ಪರ್ಶಿಸುವ ಮಾದರಿ ಇದು ಕೇವಲ ಇಸ್ರೋದ ಚಂದ್ರಯಾನ ಸರಣಿ ಯೋಜನೆಯ ಬಗ್ಗೆ ಮಾತ್ರವಲ್ಲ, ಚಂದ್ರನ ಹೊರತಾಗಿಯೂ ಮೃದು ಲ್ಯಾಂಡಿಂಗ್ನ ಇತರ ಗ್ರಹಗಳಿಗೆ ಇಸ್ರೋನ ಯೋಜನೆಗಳಿಗೆ ಉಪಯುಕ್ತವಾಗಬಹುದು ಎಂದು ವಿದ್ಯುತ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಅಮಿತವ್ ಗುಪ್ತಾ ಹೇಳುತ್ತಾರೆ.
ಇಸ್ರೋ ಈಗಾಗಲೇ ಚಂದ್ರಯಾನ-3ರ ತಯಾರಿ ಮಾಡಿಕೊಳ್ಳುತ್ತಿದೆ. ಯೋಜನೆ ನಿರ್ದೇಶಕರಾಗಿ ವೀರ ಮುತ್ತುವೇಲು ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ. ಚಂದ್ರಯಾನ-3ರ ವೆಚ್ಚ 600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 250 ಕೋಟಿ ರೂ. ರೋವರ್ ಹಾಗೂ ಉಡ್ಡಯನ ವೆಚ್ಚಕ್ಕೆ 315 ಕೋಟಿ ರೂಪಾಯಿಗೆ ತಗುಲಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಈ ಹಿಂದೆಯೇ ಹೇಳಿದ್ದರು.
ಚಂದ್ರಯಾನ -2 ನೌಕೆ ಉಡ್ಡಯನ ವೇಳೆ ಸಂಭ್ರಮಿಸಿದ ಮಗು ಜುಲೈ 22ರಂದು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ-2 ರಾಕೆಟ್ ಸೆಪ್ಟೆಂಬರ್ 2ರಂದು ಚಂದ್ರನ ಕಕ್ಷೆ ಸೇರಿತ್ತು. ಯೋಜನೆಯಂತೆ ಸೆಪ್ಟೆಂಬರ್ 7ರ ನಸುಕಿನ ಜಾವ ರೋವರ್ ಒಳಗೊಂಡ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಬೇಕಿತ್ತು. ಆದರೆ, ಲ್ಯಾಂಡಿಂಗ್ಗೆ ಕೆಲ ಕ್ಷಣಗಳು ಇರುವಂತೆ ಲ್ಯಾಂಡರ್ ಸಂಪರ್ಕ ಕಡಿತವಾಗಿತ್ತು. ಯೋಜನೆಯ ಕೊನೆಯ ಹಂತದಲ್ಲಿ ನಡೆದ ನಾಟಕೀಯ ಬೆಳವಣಿಗೆಯಿಂದ ದೇಶದ ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನೆಡೆಯಾಗಿತ್ತು. ಇದನ್ನು ಮೆಟ್ಟಿ ನಿಲ್ಲಲು ಭಾರತದ ವಿಜ್ಞಾನಿಗಳು ಮತ್ತೆ ಮೈಕೊಡವಿಕೊಂಡು ಸಾಧನೆಯ ಸವಾಲು ಸ್ವೀಕರಿಸಿ ಚಂದ್ರನತ್ತ ದಿಟ್ಟನೋಟವನ್ನು ಬೀರುತ್ತಿದ್ದಾರೆ.