ತಿರುವನಂತಪುರಂ(ಕೇರಳ): ದೇಶದಲ್ಲಿ ಮೊದಲು ಕೊರೊನಾ ವೈರಸ್ ಕಾಣಿಸಿಕೊಂಡಿದ್ದು ಕೇರಳದಲ್ಲಿ. ಚೀನಾದ ವುಹಾನ್ನಿಂದ ಇಲ್ಲಿಗೆ ಆಗಮಿಸಿದ್ದ ಮೂವರಲ್ಲಿ ಈ ಮಹಾಮಾರಿ ಕಾಣಿಸಿದ್ದ ಬಳಿಕ ದೇಶದ ಎಲ್ಲ ಭಾಗಗಳಲ್ಲೂ ಈ ಡೆಡ್ಲಿ ವೈರಸ್ ಕಾಣಿಸಿಕೊಂಡಿದೆ. ಇದೀಗ ಮಹಾರಾಷ್ಟ್ರ, ನವದೆಹಲಿ, ಮಧ್ಯಪ್ರದೇಶಗಳಲ್ಲಿ ಈ ರಕ್ಕಸ ಸೋಂಕಿನ ಅಬ್ಬರ ಜೋರಾಗಿದೆ. ಕೇರಳದಲ್ಲಿ ಮಾತ್ರ ದಿನದಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.
ಕೊರೊನಾದಿಂದ ಚೇತರಿಸಿಕೊಳ್ತಿದೆ ಕೇರಳ; ಒಂದೇ ದಿನ 36 ಡಿಸ್ಚಾರ್ಜ್, 179 ಮಂದಿ ಗುಣಮುಖ
ಮಹಾಮಾರಿ ಕೊರೊನಾದಿಂದ ತತ್ತರಿಸಿ ಹೋಗಿದ್ದ ಕೇರಳ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ.
ಕೇರಳದಲ್ಲಿ ಇಂದು ಕೇವಲ ಎರಡು ಕೊರೊನಾ ಕೇಸ್ ಕಾಣಿಸಿಕೊಂಡಿದ್ದು, 36 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಲ್ಲಿಯವರೆಗೆ 375 ಜನರಿಗೆ ಕೋವಿಡ್-19 ಕಾಣಿಸಿಕೊಂಡಿದ್ದು ಅದರಲ್ಲಿ 179 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವೆ ಕೆ. ಶೈಲಜಾ ಮಾಹಿತಿ ನೀಡಿದ್ದಾರೆ. ವಿಶೇಷವೆಂದರೆ, ಇಂದು ಒಂದೇ ದಿನ 36 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಉಳಿದಂತೆ ವಿವಿಧ ಆಸ್ಪತ್ರೆಗಳಲ್ಲಿ 194 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಮೂವರು ಸಾವನ್ನಪ್ಪಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,16,941 ಜನರನ್ನ ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ. 14,989 ಜನರ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಈಗಾಗಲೇ ಬಂದಿರುವ 13,802 ಜನರ ರಕ್ತದ ಮಾದರಿ ನೆಗೆಟಿವ್ ಆಗಿದೆ ಎಂಬ ಮಾಹಿತಿಯನ್ನು ಹೊರಗೆಡವಿದ್ದಾರೆ.