ನವದೆಹಲಿ:ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಬಂದ್ ಆಗಿದ್ದ ಪದವಿ, ಸ್ನಾತಕೋತ್ತರ ಪದವಿ ಕಾಲೇಜ್ ಇದೀಗ ಓಪನ್ ಆಗಲಿವೆ. 2020-21ನೇ ಸಾಲಿನ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಕಾಲೇಜ್ ನವೆಂಬರ್ 1ರಿಂದ ಆರಂಭಗೊಳ್ಳಲಿವೆ. ಇದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮಾಹಿತಿ ನೀಡಿದೆ.
ನವೆಂಬರ್ 1ರಿಂದ ಡಿಗ್ರಿ, ಪಿಜಿ ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್ - ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳ ಪರೀಕ್ಷೆ
2020-21ನೇ ಸಾಲಿನ ಪದವಿ, ಸ್ನಾತಕೋತ್ತರ ಕಾಲೇಜ್ ಆರಂಭಗೊಳ್ಳಲು ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನವೆಂಬರ್ 1ರಿಂದ ಓಪನ್ ಆಗಲಿವೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಶೈಕ್ಷಣಿಕ ವೇಳಾಪಟ್ಟಿ ಯುಜಿಸಿಯಿಂದ ರಿಲೀಸ್ ಆಗಿದೆ ಎಂದು ತಿಳಿಸಿದ್ದಾರೆ. ಮಹಾಮಾರಿ ಕೊರೊನಾ ಬಿಕ್ಕಟ್ಟಿನಿಂದಾಗಿ ಮುಂದೂಡಲ್ಪಟ್ಟಿದ್ದ ಪ್ರವೇಶಾತಿ ಪ್ರಕ್ರಿಯೆಯನ್ನು ಅ. 31ರೊಳಗೆ ಮುಗಿಸುವಂತೆ ಸೂಚಿಸಲಾಗಿದೆ. ಈ ವೇಳೆ ಕೊರೊನಾ ಮಾರ್ಗಸೂಚಿ ಪಾಲಿಸುವುದು ಕಡ್ಡಾಯವಾಗಿದೆ.
ಇದೇ ವೇಳೆ ಪ್ರವೇಶ ಪರೀಕ್ಷಾ ಫಲಿತಾಂಶ ಘೋಷಣೆಯಾಗುವುದು ವಿಳಂಬವಾದರೆ ನವೆಂಬರ್ 18ರಿಂದ ಶೈಕ್ಷಣಿಕ ವರ್ಷದ ತರಗತಿ ಆರಂಭ ಮಾಡುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಅಕ್ಟೋಬರ್ ವೇಳೆಗೆ ಪ್ರಥಮ ವರ್ಷದ ಮೆರಿಟ್ ಪ್ರವೇಶ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳಿಸಲು ಸೂಚನೆ ನೀಡಲಾಗಿದೆ. ಇನ್ನು 2021ರ ಮಾರ್ಚ್ 8ರಿಂದ 26ರ ನಡುವೆ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಸಲು ಯುಜಿಸಿ ಸೂಚನೆ ನೀಡಿದೆ.