ನವದೆಹಲಿ:ಕೊಲ್ಕತ್ತಾದಿಂದ ಬಾಂಗ್ಲಾದೇಶದ ಚಟ್ಟೋಗ್ರಾಮ್ ಬಂದರಿನ ಮೂಲಕ ಮೊಟ್ಟಮೊದಲ ಬಾರಿಗೆ ಸರಕು ಸಾಗಣೆ ಕಂಟೇನರ್ ಅಗರ್ತಲಾವನ್ನು ತಲುಪಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದು ಭಾರತ-ಬಾಂಗ್ಲಾದೇಶದ ಸಂಪರ್ಕ ಮತ್ತು ಆರ್ಥಿಕ ಸಹಭಾಗಿತ್ವದಲ್ಲಿ 'ಐತಿಹಾಸಿಕ ಮೈಲಿಗಲ್ಲು' ಎಂದು ಹೇಳಿದೆ.
ಐತಿಹಾಸಿಕ ಮೈಲಿಗಲ್ಲು: ಕೊಲ್ಕತ್ತಾದಿಂದ ಬಾಂಗ್ಲಾ ಹಾದಿ ಹಿಡಿದು ಅಗರ್ತಲಾ ತಲುಪಿದ ಕಂಟೇನರ್ - ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ
ಕೊಲ್ಕತ್ತಾದಿಂದ ಬಾಂಗ್ಲಾದೇಶದ ಚಟ್ಟೋಗ್ರಾಮ್ ಬಂದರಿನ ಮೂಲಕ ಮೊಟ್ಟಮೊದಲ ಸರಕು ಸಾಗಣೆ ಕಂಟೇನರ್ ಈಶಾನ್ಯ ರಾಜ್ಯ ತ್ರಿಪುರಾದ ರಾಜಧಾನಿ ಅಗರ್ತಲಾವನ್ನು ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆಯ ವಕ್ತಾರ ಅನುರಾಗ್ ಶ್ರೀವಾಸ್ತವ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಕಳೆದ ವಾರ ಕೊಲ್ಕತ್ತಾದಿಂದ ಹೊರಟ ಮೊದಲ ಟ್ರಯಲ್ ಕಂಟೇನರ್ ಹಡಗಿಗೆ ಹಸಿರು ನಿಶಾನೆ ತೋರಿಸಿದ್ದರು. ಈಶಾನ್ಯ ಪ್ರದೇಶದ ಮತ್ತಷ್ಟು ಅಭಿವೃದ್ಧಿಗೆ ಇದು ಸಹಾಯ ಮಾಡುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
"ಭಾರತ-ಬಾಂಗ್ಲಾದೇಶದ ಸಂಪರ್ಕ ಮತ್ತು ಆರ್ಥಿಕ ಸಹಭಾಗಿತ್ವದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಇದಾಗಿದ್ದು, ಕೊಲ್ಕತ್ತಾದಿಂದ ಚಟ್ಟೋಗ್ರಾಮ್ ಬಂದರಿನ ಮೂಲಕ ಮೊಟ್ಟಮೊದಲ ಕಂಟೇನರ್ ಸರಕು ಅಗರ್ತಲಾವನ್ನು ತಲುಪಿದೆ. ಇದು ಈಶಾನ್ಯ ಪ್ರದೇಶದ ಮತ್ತಷ್ಟು ಅಭಿವೃದ್ಧಿಗೆ ಸಹಾಯ ಮಾಡುತ್ತದೆ" ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.