ಹೈದರಾಬಾದ್:ಅಂಫಾನ್ ಚಂಡಮಾರುತ ಮತ್ತು ಪ್ರವಾಹದಿಂದಾಗಿ ಬಾಂಗ್ಲಾದೇಶ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕನಿಷ್ಠ 19 ಮಿಲಿಯನ್ ಮಕ್ಕಳು ಅಪಾಯದಲ್ಲಿದ್ದಾರೆ ಎಂದು ಯುನಿಸೆಫ್ ಎಚ್ಚರಿಸಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಉಭಯ ದೇಶಗಳಲ್ಲಿ ಉಂಟಾಗಿರುವ ಅಂಫಾನ್ ಚಂಡಮಾರುತ ಅಪಾಯ ಹೆಚ್ಚಿಸಿದೆ. ನಿರಾಶ್ರಿತರ ಶಿಬಿರಗಳಿಗೆ ಹೆಚ್ಚು ಜನರನ್ನು ಸ್ಥಳಾಂತರಿಸುತ್ತಿರುವ ಪರಿಣಾಮ ಕೊರೊನಾ ಹರಡುವ ಭೀತಿ ಇದೆ ಎಂದು ಹೇಳಿದೆ.
ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ದಕ್ಷಿಣ ಏಷ್ಯಾದ ಯುನಿಸೆಫ್ ಪ್ರಾದೇಶಿಕ ನಿರ್ದೇಶಕ ಜೀನ್ ಗೌಗ್ ಹೇಳಿದ್ದಾರೆ. 'ಪರಿಣಾಮ ಬೀರುವ ಪ್ರದೇಶಗಳಲ್ಲಿ ಮಕ್ಕಳು ಮತ್ತು ಅವರ ಕುಟುಂಬಗಳ ಸುರಕ್ಷತೆಯು ಒಂದು ಆದ್ಯತೆಯಾಗಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ತೆಗೆದುಕೊಂಡ ಮುಂಜಾಗ್ರತೆ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುವುದು ಉತ್ತಮ' ಎಂದಿದ್ದಾರೆ.
ಚಂಡಮಾರುತದ ಪಥವನ್ನು ಆಧರಿಸಿ, ಬಾಂಗ್ಲಾದೇಶದ ಕಾಕ್ಸ್ ಬಜಾರ್ನಲ್ಲಿ 8 ಲಕ್ಷದ 50 ಸಾವಿರಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಯುನಿಸೆಫ್, ಬಾಂಗ್ಲಾದೇಶ ಮತ್ತು ಭಾರತದ ಸರ್ಕಾರಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕಾರ್ಯನಿರ್ವಹಿಸುತ್ತಿದೆ. ಅಂಫಾನ್ ಚಂಡಮಾರುತ ಪೀಡಿತ ಮಕ್ಕಳು ಮತ್ತು ಕುಟುಂಬಗಳನ್ನು ತಲುಪುವುದಕ್ಕಾಗಿ ಮಾನವೀಯ ಕಾರ್ಯಾಚರಣೆಗಳನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದಿದ್ದಾರೆ.