ನವದೆಹಲಿ :ಭಾರತೀಯ ವಾಯುಸೇನೆಯಲ್ಲಿ (ಐಎಎಫ್) ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳ ಸಾಮರ್ಥ್ಯ 1,875 ಆಗಿದೆ. ಈ ಪೈಕಿ 10 ಫೈಟರ್ ಪೈಲಟ್‌ಗಳು ಮತ್ತು 18 ಮಂದಿ ನ್ಯಾವಿಗೇಟರ್ಗಳಾಗಿದ್ದಾರೆ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆದ ಬಳಿಕ ಐಎಎಫ್ 2016ರಲ್ಲಿ 'ಫ್ಲೈಯಿಂಗ್ ಬ್ರಾಂಚ್‌ನ ಫೈಟರ್ ಸ್ಟ್ರೀಮ್‌ನಲ್ಲಿ ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳನ್ನು ಸೇರ್ಪಡೆಗೊಳಿಸುವ' ಯೋಜನೆಯನ್ನು ಪ್ರಾರಂಭಿಸಿತ್ತು. ಇದರ ಅಡಿ 10 ಮಹಿಳಾ ಫೈಟರ್ ಪೈಲಟ್‌ಗಳನ್ನು ಈವರೆಗೆ ನಿಯೋಜಿಸಲಾಗಿದೆ. ಮಹಿಳಾ ಫೈಟರ್ ಪೈಲಟ್‌ಗಳನ್ನು ಐಎಎಫ್‌ನಲ್ಲಿ ಕಾರ್ಯತಂತ್ರದ ಅಗತ್ಯತೆಗಳು ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಅನುಗುಣವಾಗಿ ನಿಯೋಜಿಸಲಾಗಿದೆ. ಇದನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ ಎಂದು ನಾಯಕ್ ಹೇಳಿದ್ದಾರೆ.