ಕೋಲ್ಕತ್ತಾ: ನಮ್ಮ ಮಗನ ಸಾವಿಗೆ ಆಸ್ಪತ್ರೆಗಳ ನಿರ್ಲಕ್ಷ್ಯವೇ ಕಾರಣ ಎಂದು ಇತ್ತೀಚೆಗೆ ಮೃತಪಟ್ಟ ಮಧುಮೇಹ ರೋಗಿ 18 ವರ್ಷದ ಕೊರೊನಾ ಸೋಂಕಿತ ಯುವಕ ಸುಭ್ರಾಜಿತ್ ಚಟ್ಟೋಪಾಧ್ಯಾಯನ ಪೋಷಕರು ಆರೋಪಿಸಿದ್ದಾರೆ.
ಮಗ ಮೃತಪಡುವ ಮೊದಲು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಆತನಿಗೆ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಮಧುಮೇಹ ಮತ್ತು ಕೋವಿಡ್ ಇರುವುದು ದೃಢಪಟ್ಟಿತ್ತು. ಆದರೆ ಆಸ್ಪತ್ರೆಯಲ್ಲಿ ಬೆಡ್ ಕೊರತೆಯ ನೆಪ ಹೇಳಿ ದಾಖಲಿಸಿಕೊಳ್ಳಲಿಲ್ಲ. ಬಳಿಕ ನಾವು ಕಮರಹತಿಯ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ದೆವು. ಮಗ ಮಧುಮೇಹ ರೋಗಿಯಾಗಿದ್ದು, ಉಸಿರಾಟದ ತೊಂದರೆ ಇದೆ ಎಂದು ಹೇಳಿದ್ದೆವು. ಆದರೆ, ಅಲ್ಲಿಯೂ ಐಸಿಯುನಲ್ಲಿ ಹಾಸಿಗೆ ಇಲ್ಲ ಎಂದು ಹೇಳಿದ್ದರು. ನಂತರ ನಾವು ಅವನನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದೆವು. ಅಲ್ಲಿ ಅವರು ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಿದರು. ವರದಿ ಪಾಸಿಟಿವ್ ಬಂತು. ಆದರೆ ಹಾಸಿಗೆ ಇಲ್ಲ ಎಂದು ಹೇಳಿ ಚಿಕಿತ್ಸೆ ನೀಡಲು ಅವರು ನಿರಾಕರಿಸಿದರು. ಹೀಗಾಗಿ ಇಡೀ ದಿನ ನಾವು ಆ್ಯಂಬುಲೆನ್ಸ್ನಲ್ಲೇ ಕಾಲ ಕಳೆದೆವು. ಸರ್ಕಾರ ನಡೆಸುತ್ತಿರುವ ಸಾಗರ್ ದತ್ತಾ ಆಸ್ಪತ್ರೆಯಲ್ಲಿಯೂ ದಾಖಲಿಸಿಕೊಳ್ಳಲು ನಿರಾಕರಿಸಿದರು. ಬಳಿಕ ಕೆಎಂಸಿಹೆಚ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಯೂ ಆರಂಭದಲ್ಲಿ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ಆದರೆ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಬಳಿಕ ದಾಖಲಿಸಿಕೊಂಡರು ಎಂದು ಮೃತ ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ.