ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, 17 ವರ್ಷದ ಬಾಲಕಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಹರ್ಶ್ ವಿಹಾರ್ ಪ್ರದೇಶದಲ್ಲಿನ ಪ್ರತ್ಯೇಕ ಕಟ್ಟಡವೊಂದರಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಸೋದರ ಮಾವನ ಮುಂದೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಈಗಾಗಲೇ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ, ದರೋಡೆ ಹಾಗೂ ಹಲ್ಲೆ ಪ್ರಕರಣದಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಮಂಗಳವಾರ ರಾತ್ರಿ 10 ಗಂಟೆಗೆ ಸಂಬಂಧಿಕರ ಮನೆಗೆ ಭೇಟಿ ನೀಡಿ ಸೋದರ ಮಾವನೊಂದಿಗೆ ಬಾಲಕಿ ವಾಪಸ್ ಬರುತ್ತಿದ್ದಳು. ಈ ವೇಳೆ ಅಡ್ಡಗಟ್ಟಿರುವ ಮೂವರು ಬಾಲಕಿಯನ್ನ ಪಕ್ಕದ ಕಟ್ಟಡವೊಂದರಲ್ಲಿ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾರೆ. ಆರೋಪಿಗಳನ್ನ ಸಹ್ಜಾದ್, ರಾಜೀವ್ ಹಾಗೂ ಇಕ್ರಾಮ್ ಎಂದು ಗುರುತಿಸಲಾಗಿದ್ದು, ಈ ವೇಳೆ ತಡೆಗಟ್ಟಲು ಮುಂದಾಗಿದ್ದ ಸೋದರ ಮಾವನ ಮೇಲೆ ಹಲ್ಲೆ ನಡೆಸಿದ್ದಾರೆ.
ಕೃತ್ಯವೆಸಗಿದ ಬಳಿಕ ಕಾಮುಕರು ಬಾಲಕಿ ಹತ್ತಿರವಿದ್ದ ಪರ್ಸ್ ಕದ್ದು ಪರಾರಿಯಾಗಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ಬಂಧನ ಮಾಡಿದ್ದಾರೆ.