ಗುರುಗ್ರಾಮ್ (ಹರಿಯಾಣ): 16 ಜನರನ್ನು ಬಿಹಾರಕ್ಕೆ ಕರೆದೊಯ್ಯುತ್ತಿದ್ದ ಎರಡು ಆ್ಯಂಬುಲೆನ್ಸ್‌ಗಳನ್ನು ಜಿಲ್ಲಾ ಪೊಲೀಸರು ಗುರುಗ್ರಾಮದ ಬಾದ್‌ಶಾಹಪುರ ಚೆಕ್‌ಪೋಸ್ಟ್‌ನಲ್ಲಿ ತಡೆದಿದ್ದಾರೆ.
ಆ್ಯಂಬುಲೆನ್ಸ್ಗಳಲ್ಲಿದ್ದ ವ್ಯಕ್ತಿಗಳು ರೋಗಿಗಳಂತೆ ಮತ್ತು ಅವರ ಪರಿಚಾರಕರಂತೆ ನಟಿಸುತ್ತಿದ್ದರು. ಅಷ್ಟೇ ಅಲ್ಲ ಖಾಸಗಿ ಆಸ್ಪತ್ರೆಯಿಂದ ನೀಡಲಾದ ನಕಲಿ ಔಷಧಿಗಳನ್ನು ಹಿಡಿದು ಸಾಕ್ಷಿ ತೋರಿಸುತ್ತಿದ್ದರು ಎಂದು ಗುರುಗ್ರಾಮ್ ಎಸಿಪಿ ಪ್ರೀತ್ ಪಾಲ್ ಸಿಂಗ್ ಸಾಂಗ್ವಾನ್ ಅವರು ಮಾಹಿತಿ ನೀಡಿದರು.
ಆ್ಯಂಬುಲೆನ್ಸ್ಗಳು ಸೋಹ್ನಾ, ಪಾಲ್ವಾಲ್ ಮತ್ತು ಮಥುರಾ ಮೂಲಕ ಆಗ್ರಾ ಕಡೆಗೆ ಸಾಗುತ್ತಿದ್ದವು. ಅವರು ಬಾದ್‌ಶಾಹಪುರ ತಲುಪಿದಾಗ, ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲಾದ ಪೊಲೀಸರು ಅವರ ಮಾನ್ಯ ದಾಖಲೆಗಳನ್ನು ಕೇಳಿದಾಗ ಆಸ್ಪತ್ರೆಯ ಔಷಧಿ ಚೀಟಿಗಳನ್ನು ತೋರಿದರು. ಆಗ ಪೊಲೀಸರು ಪ್ರಿಸ್ಕ್ರಿಪ್ಷನ್‌ಗಳಲ್ಲಿ ನಮೂದಿಸಲಾದ ದೂರವಾಣಿ ಸಂಖ್ಯೆಗಳನ್ನು ಡಯಲ್ ಮಾಡಿದಾಗ ಅವು ನಕಲಿ ಎಂದು ತಿಳಿದುಬಂದಿದೆ.
ಆನಂತರ ವಾಹನಗಳ ಚಾಲಕರನ್ನು ವಿಚಾರಿಸಿದಾಗ ಅವರು ಪ್ರತಿ ಪ್ರಯಾಣಿಕರಿಂದ 7,000 ರೂ. ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ. ಇನ್ನು ವಾಹನದಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಾಂಗ್ವಾನ್ ತಿಳಿದರು.