ತಿರ್ಪೂರ್:ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ಹೊರಟಿದ್ದ ಕೇರಳ ರಾಜ್ಯ ಸಾರಿಗೆ ಬಸ್ವೊಂದು ತಿರ್ಪೂರ್ ಜಿಲ್ಲೆಯ ಅವಿನಾಶಿ ಪಟ್ಟಣದ ಬಳಿ ಟ್ರಕ್ಗೆ ಗುದ್ದಿದ ಪರಿಣಾಮ 20 ಮಂದಿ ಸಾವಿಗೀಡಾಗಿದ್ದಾರೆ.
ಬೆಂಗಳೂರಿನಿಂದ ಕೇರಳಕ್ಕೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಅಪಘಾತ: 20 ಮಂದಿ ಸಾವು ಇಂದು ನಸುಕಿನ ಜಾವ 3 ಗಂಟೆಗೆ ದುರ್ಘಟನೆ ಸಂಭವಿಸಿದ್ದು, ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಅಪಘಾತ ಸಂಭವಿಸಿದ ಬೆನ್ನಿಗೇ ಲಾರಿ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯಲ್ಲಿ ಕ್ಲೀನರ್ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ವಿಜಯ ಕಾರ್ತಿಕೇಯನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಕೇರಳ ಸರ್ಕಾರಕ್ಕೆ ಸಾವಿಗೀಡಾದವರ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಘಟನೆಯಲ್ಲಿ 31 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೊಯಮತ್ತೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ತಿರ್ಪೂರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರವನ್ನು ನಿರೀಕ್ಷಿಸಲಾಗುತ್ತಿದೆ.
ಕೇರಳ ಸಿಎಂ ಪರಿಹಾರದ ಭರವಸೆ...
ಕೇರಳದ ಸಾರಿಗೆ ಬಸ್ ತಮಿಳುನಾಡಿನಲ್ಲಿ ಅಪಘಾತಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ ನೀಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲು ಪಲಕ್ಕಾಡ್ ಡಿಸಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಎಲ್ಲ ಪರಿಹಾರ ಕ್ರಮಗಳನ್ನು ತಮಿಳುನಾಡು ಸರ್ಕಾರ ಮತ್ತು ತಿರ್ಪೂರ್ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು ಎಂದಿದ್ದಾರೆ.