ಕರ್ನಾಟಕ

karnataka

ETV Bharat / bharat

1885ರ ಮೊದಲ ಅರ್ಜಿಯಿಂದ ಸತತ 40 ದಿನಗಳ ನಿತ್ಯ ವಿಚಾರಣೆವರೆಗೆ..! ಇಂಚಿಂಚು ಮಾಹಿತಿ - ನಿರ್ಮೋಹಿ ಅಖಾರ

ಸತತ 40 ದಿನಗಳ ಕಾಲ ನಿತ್ಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ಎಲ್ಲ ವಾದ-ಪ್ರತಿವಾದವನ್ನು ಆಲಿಸಿ, ತೀರ್ಪನ್ನು ಕಾಯ್ದಿರಿಸಿದೆ. ಅಷ್ಟಕ್ಕೂ 2.77 ಎಕರೆ ಜಾಗದ ಸುತ್ತ ಸುತ್ತಿಕೊಂಡಿರುವ ವಿವಾದದ ಸಂಪೂರ್ಣ ಹಿನ್ನೋಟ ಇಲ್ಲಿದೆ.

ಅಯೋಧ್ಯೆ ಭೂವಿವಾದ

By

Published : Oct 17, 2019, 9:12 AM IST

Updated : Oct 17, 2019, 10:52 AM IST

ನವದೆಹಲಿ:ರಾಜಕೀಯ, ಧಾರ್ಮಿಕ ಸೂಕ್ಷ್ಮ ವಿವಾದವಾಗಿರುವ ರಾಮಜನ್ಮಭೂಮಿ ಬಾಬರಿ ಮಸೀದಿ ಪ್ರಕರಣದ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ.

ಸತತ 40 ದಿನಗಳ ಕಾಲ ನಿತ್ಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯಿ ನೇತೃತ್ವದ ಪೀಠ ಎಲ್ಲ ವಾದ-ಪ್ರತಿವಾದವನ್ನು ಆಲಿಸಿ, ತೀರ್ಪನ್ನು ಕಾಯ್ದಿರಿಸಿದೆ. ಅಷ್ಟಕ್ಕೂ 2.77 ಎಕರೆ ಜಾಗದ ಸುತ್ತ ಸುತ್ತಿಕೊಂಡಿರುವ ವಿವಾದ ಸಂಪೂರ್ಣ ಹಿನ್ನೋಟ ಇಲ್ಲಿದೆ.

ಅಯೋಧ್ಯೆ ಪ್ರಕರಣದ ವಾದ - ಪ್ರತಿವಾದ ಕೊನೆಗೂ ಅಂತ್ಯ: ಐತಿಹಾಸಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂ!

ವಿವಾದದ ಘಟನಾವಳಿ:

  • 1528:ಬಾಬರ್ ಆಡಳಿತದಲ್ಲಿ ಕಮಾಂಡರ್ ಆಗಿದ್ದ ಮೀರ್ ಭಕ್ಷಿ ಬಾಬ್ರಿ ಮಸೀದಿ ನಿರ್ಮಿಸಿತು.
  • 1885:ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಮೊದಲ ಬಾರಿಗೆ ಕೋರ್ಟ್​ ಮೆಟ್ಟಿಲೇರಿತು. ರಾಮಜನ್ಮಭೂಮಿಯಲ್ಲಿ ಕಟ್ಟಡದ ಹೊರವಲಯಲ್ಲಿ ಮೇಲ್ಛಾವಣಿ ನಿರ್ಮಿಸಲು ಅನುಮತಿ ಕೋರಿ ಮಹಾಂತ ರಘುವೀರ್ ದಾಸ್ ಫೈಜಾಬಾದ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಾರೆ. ಕೋರ್ಟ್​ ಅರ್ಜಿಯನ್ನು ತಿರಸ್ಕರಿಸುತ್ತದೆ.
  • 23 ಡಿಸೆಂಬರ್ 1949:ಮಸೀದಿಯ ಕೇಂದ್ರಭಾಗದಲ್ಲಿ ದೇವರ ಮೂರ್ತಿಯನ್ನು ಇರಿಸುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ.
  • 16 ಜನವರಿ 1950: ರಾಮ್ ಲಲ್ಲಾರನ್ನು ಪೂಜಿಸಲು ಅನುಮತಿ ನೀಡಬೇಕು ಎಂದು ಗೋಪಾಲ್ ಸಿಂಗ್ ವಿಶಾರದ್ ಫೈಜಾಬಾದ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುತ್ತಾರೆ.
  • 5 ಡಿಸೆಂಬರ್ 1950: ರಾಮಜನ್ಮಭೂಮಿಯಲ್ಲಿ ತಮ್ಮ ಪೂಜೆಯನ್ನು ಮುಂದುವರಿಸಲು ಅನುಮತಿ ಕೋರಿ ಮಹಾಂತ ಪರಮಹಂಸ ರಾಮಚಂದ್ರ ಅರ್ಜಿ ಸಲ್ಲಿಕೆ ಮಾಡುತ್ತಾರೆ.
  • 17 ಡಿಸೆಂಬರ್ 1959:ವಿವಾದಿತ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಮೋಹಿ ಅಖಾರ ಅರ್ಜಿ ಸಲ್ಲಿಸುತ್ತದೆ.
  • 18 ಡಿಸೆಂಬರ್ 1961: ಉತ್ತರ ಪ್ರದೇಶದ ಕೇಂದ್ರ ವಕ್ಫ್ ಬೋರ್ಡ್​ ಸಹ ಇದೇ ಜಾಗದ ಹಕ್ಕಿಗಾಗಿ ಅರ್ಜಿ ಸಲ್ಲಿಸುತ್ತದೆ.
  • 1 ಜುಲೈ 1989:ಭಗವಾನ್ ರಾಮ್ ಲಲ್ಲಾ ವಿರಾಜ್​ಮಾನ ಹೆಸರಿನಲ್ಲಿ ಐದನೇ ಅರ್ಜಿ ಕೋರ್ಟ್​ನಲ್ಲಿ ಸಲ್ಲಿಕೆಯಾಗುತ್ತದೆ.
  • 6 ಡಿಸೆಂಬರ್ 1992: ಬಾಬ್ರಿ ಮಸಿದಿಯನ್ನು ಕೆಡವಲಾಯಿತು.
  • 1993:ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಬಗ್ಗೆ ಹತ್ತಾರು ಅರ್ಜಿ ಸುಪ್ರೀಂನಲ್ಲಿ ಸಲ್ಲಿಕೆಯಾಯಿತು. ಇಸ್ಮಾಯಿಲ್ ಫಾರೂಖಿ ಕೆಲವಾರು ಕಾಯ್ದೆಯನ್ನು ಪ್ರಶ್ನಿಸಿ ಅಲಹಾಬಾದ್​ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುತ್ತಾರೆ.
  • 24 ಅಕ್ಟೋಬರ್ 1994: ಮಸೀದಿ ಮುಸ್ಲಿಮರ ಅವಿಭಾಜ್ಯ ಅಂಗವಲ್ಲ ಎಂದು ಸುಪ್ರೀಂ ಐತಿಹಾಸಿಕ ತೀರ್ಪು ನೀಡಿತು.
  • 2002 ಏಪ್ರಿಲ್: ಮೂವರು ಹೈಕೋರ್ಟ್​ ಜಡ್ಜ್​ಗಳು ವಿವಾದಿತ ಜಾಗದ ಅರ್ಜಿಗಳ ವಿಚಾರಣೆ ಆರಂಭಿಸುತ್ತಾರೆ.
  • 30 ಸೆಪ್ಟೆಂಬರ್ 2010:ಅಲಹಾಬಾದ್​ನ ಲಖನೌ ಪೀಠ 2.77 ಎಕರೆಯ ವಿವಾದಿತ ಜಾಗವನ್ನು ಮೂರು ಭಾಗವನ್ನಾಗಿ ಮಾಡಿ ರಾಮ್​ ಲಲ್ಲಾ, ಸುನ್ನಿ ವಕ್ಫ್ ಬೋರ್ಡ್​ ಹಾಗೂ ನಿರ್ಮೋಹಿ ಅಖಾರಕ್ಕೆ ನೀಡುತ್ತದೆ.
  • 9 ಮೇ 2011:ಅಲಹಾಬಾದ್ ತೀರ್ಪನ್ನು ಸುಪ್ರೀಂ ಕೋರ್ಟ್​ ತಡೆಹಿಡಿಯುತ್ತದೆ.
  • 26 ಫೆಬ್ರವರಿ 2016: ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಸುಬ್ರಮಣ್ಯಂ ಸ್ವಾಮಿ ಸುಪ್ರೀಂ ಮೊರೆ ಹೋಗುತ್ತಾರೆ.
  • 21 ಮಾರ್ಚ್​ 2017: ಅಯೋಧ್ಯೆ ಭೂವಿವಾದವನ್ನು ಕೋರ್ಟ್​ ಹೊರಗೆ ಬಗೆಹರಿಸುವಂತೆ ಮುಖ್ಯ ನ್ಯಾಯಮೂರ್ತಿ ಖೇಹರ್ ಸಲಹೆ ನೀಡುತ್ತದೆ.
  • 7 ಆಗಸ್ಟ್ 2017: ಸುಪ್ರೀಂನ ಮೂವರು ಸದಸ್ಯರ ಪೀಠ 2010 ಅಲಹಾಬಾದ್ ಕೋರ್ಟ್​ ತೀರ್ಪಿನ ಮೇಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಳ್ಳುತ್ತದೆ.
  • 8 ಆಗಸ್ಟ್ 2017:ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಅಂದರೆ ವಿವಾದಿತ ಸ್ಥಳದಿಂದ ಕೊಂಚ ದೂರದಲ್ಲಿ ಮಸೀದಿ ನಿರ್ಮಿಸಬಹುದು ಎಂದು ಕೇಂದ್ರ ಶಿಯಾ ವಕ್ಫ್ ಬೋರ್ಡ್​ ಸುಪ್ರೀಂಗೆ ತಿಳಿಸುತ್ತದೆ.
  • 5 ಡಿಸೆಂಬರ್ 2017:ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಎಸ್​ ಅಬ್ದುಲ್ ನಜೀರ್ ನೇತೃತ್ವದ ಕೊನೆಯ ವಿಚಾರಣೆ ನಡೆಸುತ್ತದೆ.
  • 8 ಫೆಬ್ರವರಿ 2018:ಅಯೋಧ್ಯೆ ವಿವಾದವನ್ನು ಕೇವಲ ಭೂವಿವಾದವನ್ನಾಗಿ ಮಾತ್ರವೇ ಪರಿಗಣಿಸುವಂತೆ ಅರ್ಜಿದಾರರಿಗೆ ಸುಪ್ರೀಂ ಸೂಚಿಸಿ ವಿಚಾರಣೆಯನ್ನು ಮತ್ತೆ ಆರಂಭಿಸುತ್ತದೆ.
  • 14 ಮಾರ್ಚ್​ 2018: ಸುಬ್ರಮಣ್ಯಂ ಸ್ವಾಮಿ ಅರ್ಜಿ ಸೇರಿದಂತೆ ಎಲ್ಲ ಮಧ್ಯಂತರ ಅರ್ಜಿಯನ್ನು ಸುಪ್ರೀಂ ತಳ್ಳಿಹಾಕುತ್ತದೆ.
  • 6 ಏಪ್ರಿಲ್ 2018: ವಿವಾದವನ್ನು ಮತ್ತೊಮ್ಮೆ ಪರಿಗಣಿಸಿ1994 ತೀರ್ಪನ್ನು ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ರಾಜೀವ ಧವನ್ ಅರ್ಜಿ ಸಲ್ಲಿಸುತ್ತಾರೆ.
  • 27 ಸೆಪ್ಟೆಂಬರ್ 2018: ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಕೋರ್ಟ್​ ನಿರಾಕರಿಸಿ ತ್ರಿಸದಸ್ಯ ಪೀಠದಲ್ಲೇ ಅ.29ರಿಂದ ವಿಚಾರಣೆ ನಡೆಸುವುದಾಗಿ ಹೇಳುತ್ತದೆ.
  • 4 ಜನವರಿ 2019: ಅಯೋಧ್ಯೆ ಭೂವಿವಾದವನ್ನು ಸೂಕ್ತ ಪೀಠ ಜನವರಿ 10ರಿಂದ ವಿಚಾರಣೆ ನಡೆಸಲಿದೆ ಎಂದು ದ್ವಿಸದಸ್ಯ ಪೀಠ ಹೇಳುತ್ತದೆ
  • 8 ಜನವರಿ 2019: ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪಂಚ ಸದಸ್ಯ ಪೀಠ( ಜಸ್ಟೀಸ್ ಎಸ್​.ಎ.ಬೋಬ್ಡೆ, ಎನ್​.ವಿ.ರಮಣ, ಯು,ಯು, ಲಲಿತ್ ಹಾಗೂ ಡಿ.ವೈ.ಚಂದ್ರಚೂಡ್) ಜನವರಿ 10ರಿಂದ ವಿಚಾರಣೆ ನಡೆಸಲಿದೆ ಎನ್ನುವ ತೀರ್ಮಾನ ಹೊರಬೀಳುತ್ತದೆ.
  • 10 ಜನವರಿ 2019:ವಿಚಾರಣೆ ಆರಂಭದ ದಿನವೇ ಪೀಠದ ಸದಸ್ಯರಾದ ಯು.ಯು.ಲಲಿತ್ ಹಿಂದೆಸರಿಯುತ್ತಾರೆ.
  • 20 ಫೆಬ್ರವರಿ 2019:ಅಯೋಧ್ಯೆ ಪೀಠವೇ ಭೂವಿವಾದ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್​ ಪ್ರಕಟಣೆ ತಿಳಿಸುತ್ತದೆ.
  • 8 ಮಾರ್ಚ್​ 2019: ಅಯೋಧ್ಯೆ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುವಂತೆ ಸುಪ್ರೀಂ ಹೇಳುತ್ತದೆ. ಇದಕ್ಕಾಗಿ ಜಸ್ಟೀಸ್ ಎಫ್​​.ಎಂ.ಐ.ಖಲೀಫುಲ್ಲಾ, ಧಾರ್ಮಿಕ ಗುರು ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಒಳಗೊಂಡ ಸಮಿತಿಯನ್ನು ನೇಮಿಸುತ್ತದೆ.
  • 2 ಆಗಸ್ಟ್ 2019: ಸುಮಾರು ಎಂಟು ವಾರಗಳ ಕಾಲ ನಡೆದ ರಹಸ್ಯ ಮಧ್ಯಸ್ಥಿಕೆ ಮಾತುಕತೆ ವಿವಾದವನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದರು. ಆಗಸ್ಟ್ 6ರಿಂದ ಸುಪ್ರೀಂ ನಿತ್ಯ ವಿಚಾರಣೆ ನಡೆಸುವುದಾಗಿ ಗೊಗೊಯಿ ತಿಳಿಸಿದರು.
  • 6 ಆಗಸ್ಟ್ 2019:ಸುಪ್ರೀಂ ಕೋರ್ಟ್​ ಅಯೋಧ್ಯೆ ಭೂವಿವಾದ ಪ್ರಕರಣದ ನಿತ್ಯ ವಿಚಾರಣೆ ಆರಂಭಿಸಿತು.
  • 18 ಸೆಪ್ಟೆಂಬರ್ 2019:ಅಯೋಧ್ಯೆ ವಿವಾದವನ್ನು ಶೀಘ್ರ ಕೊನೆಗೊಳಿಸುವ ಸಲುವಾಗಿ ಅ.18ಕ್ಕೆ ಅಂತಿಮ ವಿಚಾರಣೆ ಎಂದು ರಂಜನ್ ಗೊಗೊಯಿ ಅರ್ಜಿದಾರರಿಗೆ ಹೇಳಿದರು.
  • 20 ಸೆಪ್ಟೆಂಬರ್ 2019:ವಿಚಾರಣೆ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿತ್ಯ ವಿಚಾರಣೆಯನ್ನು ಒಂದು ಗಂಟೆ ಹೆಚ್ಚಳ ಮಾಡಲಾಯಿತು. ಕೋರ್ಟ್​ ಅವಧಿಯನ್ನು ಸಂಜೆ 4ರ ಬದಲಾಗಿ 5ಕ್ಕೆ ವಿಸ್ತರಿಸಲಾಯಿತು.
  • 16 ಅಕ್ಟೋಬರ್ 2019: ಸತತ 40 ದಿನಗಳ ನಡೆದ ನಿತ್ಯ ವಿಚಾರಣೆ ಪೂರ್ಣ. ಅರ್ಜಿದಾರರಿಗೆ ವಾದದ ಸಾರಾಂಶವನ್ನು ಕೋರ್ಟ್​ಗೆ ಸಲ್ಲಿಸಲು ಮೂರು ದಿನದ ಕಾಲಾವಕಾಶ ನೀಡಿ ತೀರ್ಪನ್ನು ಕಾಯ್ದಿರಿಸಿದೆ.
Last Updated : Oct 17, 2019, 10:52 AM IST

ABOUT THE AUTHOR

...view details