ತಮಿಳುನಾಡು:ಭಾವನೇ ತನ್ನ ಪತ್ನಿಯ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ನಾಗಪಟ್ಟಣಂ ಜಿಲ್ಲೆಯ ಮಾಯಿಲಾಡುದುರೈ ಬಳಿಯ ಹಳ್ಳಿಯಲ್ಲಿ ನಡೆದಿದೆ.
ಬಾಲಕಿಯ ತಾಯಿ ಹಳ್ಳಿಯಲ್ಲಿ ಪೌರ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದು, 14 ವರ್ಷದ ಬಾಲಕಿ ಆಕೆಯ ಜೊತೆ ಇದ್ದಳು. ಬಾಲಕಿಯ ಇಬ್ಬರು ಹಿರಿಯ ಸಹೋದರಿಯರು ಪೌರ ಕಾರ್ಮಿಕರನ್ನು ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಇತ್ತೀಚೆಗೆ ತಾಯಿ, ಆಕೆಯ ಸಹೋದರಿಯರು, ಅಳಿಯ ಬಾಲಕಿಯನ್ನು ಮೈಲಾಡುತುರೈ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಸುಳ್ಳು ದಾಖಲೆಗಳನ್ನು ನೀಡಿ, ಕಳೆದ ಶನಿವಾರ ಬಾಲಕಿಯ ಹೆರಿಗೆ ಮಾಡಿಸಿದ್ದರು. ಬಾಲಕಿಯ ವಯಸ್ಸು ಮತ್ತು ಮದುವೆಯ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂಬ ಸಂಶಯ ಆಸ್ಪತ್ರೆಯ ಸಿಬ್ಬಂದಿಗೆ ಬಂದಿತ್ತು. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿ ಅನುಮಾನಗೊಂಡು ಬಾಲಕಿಯೊಂದಿಗೆ ಮಾತನಾಡಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಕಂಡು ಬಂದಿದೆ. ಹೀಗಾಗಿ ಆಸ್ಪತ್ರೆ ಅಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಾಲಕಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪೊಲೀಸರು ಇದಕ್ಕೆ ಸಂಬಂಧಿಸಿದ ತನಿಖೆ ಪ್ರಾರಂಭಿಸಿದರು. ಅಕ್ಕನ ಗಂಡನೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಾಯಿ ಮತ್ತು ಸೋದರಿಗೆ ಈ ಕ್ರೂರ ಕೃತ್ಯದ ಬಗ್ಗೆ ತಿಳಿದಾಗ, ಅವರು ಆತನೊಂದಿಗೆ ಮದುವೆ ಮಾಡಿಸಿದ್ದಾರೆ. ಮಾಯಿಲಾಡತುರೈ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ತಾಯಿ ಮತ್ತು ಅಳಿಯನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಲದೇ ಅದೇ ಗ್ರಾಮದ ರಾಜ್ (28), ರಾಧಾಕೃಷ್ಣನ್ (73) ಮತ್ತು ಸೆಂಥಿಲ್ ಕುಮಾರ್ (47) ಕೂಡ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇನ್ನೂ ಕೆಲ ಜನ ಕೂಡ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.