ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿ 12 ವರ್ಷದ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ದೆಹಲಿ ಮಹಿಳಾ ಆಯೋಗದ ನಡುವಿನ ಭಿನ್ನಾಭಿಪ್ರಾಯಗಳು ಮುಂದುವರೆದಿವೆ.
ಆರೋಪಿಯನ್ನು ತಡವಾಗಿ ಬಂಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಆದಷ್ಟು ಬೇಗ ಚಾರ್ಜ್ಶೀಟ್ ಫೈಲ್ ಮಾಡುವಂತೆ ದೆಹಲಿ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಸ್ವಾತಿ ಮಲಿವಾಲ್ ಜೊತೆ ಈಟಿವಿ ಭಾರತ ಚಿಟ್‌ಚಾಟ್ ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಸಹಕಾರ ನೀಡುತ್ತಿಲ್ಲ. ಸ್ವತಃ ಮೆಡಿಕಲ್ ರಿಪೋರ್ಟ್ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ದೃಢಪಡಿಸಿದೆ. ಆದರೆ ದೆಹಲಿ ಪೊಲೀಸರು ಇದನ್ನು ಕೊಲೆ ಯತ್ನ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದೇಕೆ? ಎಂದು ಮಲಿವಾಲ್ ಪ್ರಶ್ನಿಸಿ ಅಪರಾಧಿಯನ್ನು ಆರು ತಿಂಗಳೊಳಗೆ ಗಲ್ಲಿಗೇರಿಸಬೇಕೆಂದು ಸ್ವಾತಿ ಮಲಿವಾಲ್ ಒತ್ತಾಯಿಸಿದ್ದಾರೆ.
ಸಂತ್ರಸ್ತೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನದಿಂದ ದಿನಕ್ಕೆ ಆಕೆಯ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದೆ. ಆಕೆಗೆ ನ್ಯಾಯ ಒದಗಿಸುವ ಕರ್ತವ್ಯ ಪೊಲೀಸರದ್ದಾಗಿದೆ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.
ಆಗಸ್ಟ್ 6ರಂದು ದೆಹಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಚಾರ ನಡೆದಿತ್ತು. ಇದು ಮಾತ್ರವಲ್ಲದೇ ಆಕೆಯ ಮುಖ ಹಾಗೂ ಹೊಟ್ಟೆಯ ಮೇಲೆ ಚೂಪಾದ ಆಯುಧಗಳಿಂದ ದಾಳಿ ಮಾಡಲಾಗಿತ್ತು. ಇದಾದ ನಂತರ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನೆಗಳು ನಡೆದಿದ್ದವು.