ನವದೆಹಲಿ:ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದ ಜಪಾನಿನ ವೈಭವೋಪೇತ ಕ್ರೂಸ್ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ 119 ಭಾರತೀಯರು ಮತ್ತು ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ ಐವರನ್ನು ಹೊತ್ತ ವಿಶೇಷ ಏರ್ ಇಂಡಿಯಾ ವಿಮಾನ ಇಂದು ಬೆಳಿಗ್ಗೆ ನವದೆಹಲಿ ತಲುಪಿದೆ.
ಜನರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟ ಜಪಾನ್ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಐಷಾರಾಮಿ ಕ್ರೂಸ್ ಹಡಗಿನಲ್ಲಿರುವ 3,711 ಜನರ ಪೈಕಿ 138 ಮಂದಿ ಭಾರತೀಯರಿದ್ದರು. ಅದರಲ್ಲಿ 132 ಜನ ಹಡಗಿನಲ್ಲಿ ಕೆಲಸ ಮಾಡುವ ಸಿಬ್ಬಂದಿಯಾಗಿದ್ದು, 6 ಜನ ಪ್ರಯಾಣಿಕರಾಗಿದ್ದರು. ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಫೆಬ್ರವರಿ 5 ರಂದು ಹಡಗು ಸಂಚಾರಕ್ಕೆ ಜಪಾನ್ ನಿರ್ಬಂಧ ವಿಧಿಸಿತ್ತು. ಹೀಗಾಗಿ ಟೋಕಿಯೊ ಬಳಿಯ ಯೋಕೋಹಾಮಾದಲ್ಲಿ ಹಡಗು ಲಂಗರು ಹಾಕಿದೆ.
ಜಪಾನಿನ ಕ್ರೂಸ್ ಡೈಮಂಡ್ ಪ್ರಿನ್ಸೆಸ್ ಹಡಗು
138 ಭಾರತೀಯರ ಪೈಕಿ 16 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಅವರಿಗೆ ಜಪಾನ್ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಭಾರತ ಸರ್ಕಾರ ತಾಯ್ನಾಡಿಗೆ ವಾಪಸ್ಸು ಕರೆಸಿಕೊಂಡಿದೆ.
ಚೀನಾದ ವುಹಾನ್ನಿಂದ 112 ಜನರ ಸ್ಥಳಾಂತರ
ಇತ್ತ ಚೀನಾಕ್ಕೆ ಪರಿಹಾರ ಸಾಮಾಗ್ರಿ ಹೊತ್ತೊಯ್ದಿದ್ದ ಗ್ಲೋಬ್ ಮಾಸ್ಟರ್ ವಿಮಾನ 36 ವಿದೇಶಿಗರೂ ಸೇರಿದಂತೆ 112 ಜನರನ್ನು ಭಾರತಕ್ಕೆ ಕರೆತಂದಿದೆ. ಈ 112 ಜನರನ್ನು ಚಾವ್ಲಾದಲ್ಲಿರುವ ಐಟಿಬಿಪಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.