ಚಂಡೀಗಢ: ಹಾಸಿಗೆಯಿಂದ ಎದ್ದು ಓಡಾಡಲಾರದ ಸ್ಥಿತಿಯಲ್ಲಿದ್ದ 110 ವಯಸ್ಸಿನ ವೃದ್ಧೆಯೊಬ್ಬರಿಗೆ ಚಂಡೀಗಢ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು(ಪಿಜಿಐಎಂಇಆರ್) ಸೊಂಟ ಬದಲಿ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಗೊಂಡಿದೆ.
ಜನವರಿ 8 ರಂದು ಈ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಮನೆಯಲ್ಲಿ ನಡೆದಾಡುವ ವೇಳೆ ವೃದ್ಧೆಯು ಕೆಳಗೆ ಬಿದ್ದ ಪರಿಣಾಮ ಅವರ ಬಲ ಸೊಂಟದ ಭಾಗ ಮುರಿದಿತ್ತು.
ಇನ್ನು ಶಸ್ತ್ರ ಚಿಕಿತ್ಸೆ ನಂತರ, ವೈದ್ಯರಾದ ವಿಜಯ್ ಗೋನಿ ಪ್ರತಕ್ರಿಯಿಸಿದ್ದು, ಇಳಿ ವಯಸ್ಸಿನವರಿಗೆ ಈ ರೀತಿ ಶಸ್ತ್ರ ಚಿಕಿತ್ಸೆ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ನಾವು ಇಲ್ಲಿಯವರೆಗೂ 101 ವರ್ಷದ ವಯಸ್ಸಿನವರಿಗೆ ಶಸ್ತ್ರ ಚಿಕಿತ್ಸೆ ನಿರ್ವಹಿಸಿರಲಿಲ್ಲ. ಇಂತಹ ಶಸ್ತ್ರ ಚಿಕಿತ್ಸೆ ಮಾಡಿದ್ದು, ಇದೇ ಮೊದಲ ಸಲ, ಹೀಗಾಗಿ ಈ ಕೆಲಸ ಸಂತಸ ತಂದಿದೆ ಎಂದಿದ್ದಾರೆ.
ಇಳಿ ವಯಸ್ಸಿನವರಿಗೆ ಶಸ್ತ್ರ ಚಿಕಿತ್ಸೆ ಮಾಡುವ ವೇಳೆ ಹಲವಾರು ರೀತಿಯ ಪರೀಕ್ಷೆ ಹಾಗೂ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತದೆ. ಚಿಕಿತ್ಸೆ ನಡೆಸಿದರೆ ಫಲಿಸಬಹುದೇ ಎಂಬುದನ್ನ ಮೊದಲು ಪರೀಕ್ಷಿಸಿ ನಂತರ ಶಸ್ತ್ರ ಚಿಕಿತ್ಸೆ ನೆರವೇರಿಸಬೇಕಾದ ಅಗತ್ಯ ಇತ್ತು. ಆದರೆ ಇದು ಯಶಸ್ವಿಯಾಗಿದೆ ಎಂದು ವೈದ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಎದ್ದು ಓಡಾಡಲಾರದ ನಮ್ಮ ತಾಯಿಯವರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವೈದ್ಯರು ಪವಾಡ ಮಾಡಿದ್ದಾರೆ ಎಂದು ವೃದ್ಧೆಯ ಮಗ ಹರ್ಷ ವ್ಯಕ್ತಪಡಿಸಿದ್ದಾನೆ.