ಗುವಾಹಟಿ (ಅಸ್ಸೋಂ): 100 ವರ್ಷ ವಯಸ್ಸಿನ ವೃದ್ಧೆ ಕೊರೊನಾ ಗೆದ್ದು ಬಂದಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಗುವಾಹಟಿ ಮೂಲದ ವೃದ್ಧಾಶ್ರಮವೊಂದರ ಬೋರ್ಡರ್ ಮಾಯ್ ಹ್ಯಾಂಡಿಕ್(100ರ ವೃದ್ಧೆ) ಕಳೆದ ಕೆಲವು ದಿನಗಳಿಂದ ಇಲ್ಲಿನ ಮಹೇಂದ್ರ ಮೋಹನ್ ಚೌಧರಿ ಆಸ್ಪತ್ರೆಯಲ್ಲಿ (ಎಂಎಂಸಿಹೆಚ್) ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದರು.
ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ಟ್ವೀಟ್ ಮಾಡಿದ್ದು, 100ರ ವೃದ್ಧೆ ಕೊರೊನಾ ಜಯಿಸಿ ಬಂದಿರುವುದು ನಿಜಕ್ಕೂ ಸ್ಫೂರ್ತಿದಾಯಕದ ವಿಷಯ. ಎಂಎಂಸಿಹೆಚ್ ಆಸ್ಪತ್ರೆ ಸಿಬ್ಬಂದಿಯ ಶ್ರಮ ಮತ್ತು ಬೆಂಬಲದಿಂದ ಸೋಂಕಿತರು ಗುಣಮುಖರಾಗಿದ್ದು, ಇಚ್ಛಾಶಕ್ತಿಯಿಂದ ಎಲ್ಲವೂ ಸಾಧ್ಯ ಎಂಬ ಸಂದೇಶ ಸಾರಿದ್ದಾರೆಂದು ತಿಳಿಸಿದರು. ಜೊತೆಗೆ, ಹ್ಯಾಂಡಿಕ್ ವೃದ್ಧಾಶ್ರಮಕ್ಕೆ ಮರಳಿದ ಕೂಡಲೇ ನಾನು ಮತ್ತು ನನ್ನ ತಂಡ ಅವರಿಗೆ ಶುಭಹಾರೈಸಲು ತೆರಳುತ್ತೇವೆಂದು ಹೇಳಿದರು.
ಅಸ್ಸೋಂ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,46,575 ಮತ್ತು ಮೃತರ ಸಂಖ್ಯೆ 492ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಪೈಕಿ 930 ಮಂದಿ ರಾಜ್ಯದ 5 ವೈದ್ಯಕೀಯ ಕಾಲೇಜುಗಳಲ್ಲಿ ಪ್ಲಾಸ್ಮಾ ದಾನ ಮಾಡಿದ್ದಾರೆ.
ಈ ಮೊದಲು ಕರ್ನಾಟಕದಲ್ಲಿ 100ರ ವೃದ್ಧೆ(ಮಾರ್ಸೆಲಿನ್ ಸಲ್ದಾನಾ) ಕೇವಲ 9 ದಿನಗಳಲ್ಲಿ ಕೊರೊನಾ ಗೆದ್ದು ಬಂದಿದ್ದರು.