ನವದೆಹಲಿ:ಕಳೆದ ಒಂಬತ್ತು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಸತತ ಸೋಲುಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ. ತನ್ನ ವರ್ಚಸ್ಸನ್ನು ಮರಳಿ ಹೆಚ್ಚಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕಾಗಿ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಜನರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಯಾತ್ರೆಯು ಸಾಮಾಜಿಕ ಆಂದೋಲನವಾಗಿದೆ. ಆದರೆ, ಮುಂಬರುವ ಹಾಥ್ ಸೇ ಹಾಥ್ ಜೋಡೋ ಕಾರ್ಯಕ್ರಮವು ರಾಜಕೀಯ ಅಭಿಯಾನವಾಗಲಿದೆ ಎಂದು ಕಾಂಗ್ರೆಸ್ ಶುಕ್ರವಾರ ಪ್ರಕಟಿಸಿದೆ.
ಜ.30ಕ್ಕೆ ಭಾರತ್ ಜೋಡೋ ಯಾತ್ರೆ ಮುಕ್ತಾಯ:ಸೆಪ್ಟೆಂಬರ್ 7ರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಈ ಪಾದಯಾತ್ರೆ ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ತಲುಪಿ ಮುಕ್ತಾಯವಾಗಲಿದೆ. ಭಾರತ್ ಜೋಡೋ ಯಾತ್ರೆಯು ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧದ ಸಾಮಾಜಿಕ ಆಂದೋಲನವಾಗಿದೆ. ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಧ್ರುವೀಕರಣ ಹಾಗೂ ಅಧಿಕಾರದ ಕೇಂದ್ರೀಕರಣದ ವಿರುದ್ಧದ ಜನರಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಭಾರತ್ ಜೋಡೋ ಯಾತ್ರೆ ಉದ್ದೇಶವಾಗಿದೆ. ಇದು ರಾಜಕೀಯ ಲಾಭಕ್ಕಾಗಿ ಕೈಗೊಂಡ ಯಾತ್ರೆಯಲ್ಲ ಎಂದು ಕಾಂಗ್ರೆಸ್ ಒತ್ತಿ ಹೇಳುತ್ತಿದೆ.
26ರಿಂದ ಹಾಥ್ ಸೇ ಹಾಥ್ ಜೋಡೋ: ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆಯ ಉದ್ದೇಶ ರಾಜಕೀಯವಲ್ಲ ಎಂದು ಕಾಂಗ್ರೆಸ್ ಹೇಳುತ್ತಿದ್ದರೂ, ಯಾತ್ರೆಯ ಉದ್ದಕ್ಕೂ ಜನರಿಂದ ನಿರೀಕ್ಷೆಗಿಂತ ಹೆಚ್ಚಿನ ಮತ್ತು ಉತ್ತಮ ಬೆಂಬಲ ಸಿಕ್ಕಿದೆ ಎಂದರೆ ತಪ್ಪಲ್ಲ. ಇದರ ಯಶಸ್ಸನ್ನು ಮನಗಂಡು ಹಾಥ್ ಸೇ ಹಾಥ್ ಜೋಡೋಗೆ ಕಾಂಗ್ರೆಸ್ ಸಜ್ಜಾಗಿದೆ. ಜನವರಿ 26ರಿಂದಲೇ ಈ ಹಾಥ್ ಸೇ ಹಾಥ್ ಜೋಡೋ ಪ್ರಾರಂಭವಾಗಲಿದೆ. 2023ರಲ್ಲಿ ನಡೆಯಲಿರುವ ಒಂಬತ್ತು ವಿಧಾನಸಭಾ ಚುನಾವಣೆಗಳು ಮತ್ತು 2024ರ ಲೋಕಸಭಾ ಚುನಾವಣೆಗೆ ಜನ ಬೆಂಬಲವನ್ನು ಗಳಿಸುವುದೇ ಇದರ ಗುರಿಯಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿದೆ.
ಜನ ಸಂಪರ್ಕ ಗಳಿಸುವ ಧ್ಯೇಯ:2022ರ ಮೇ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಶಿಬಿರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಭಾರತ್ ಜೋಡೋ ಯಾತ್ರೆ ನಡೆಸುವ ಯೋಜನೆ ರೂಪತಾಳಿತ್ತು. ಜೊತೆಗೆ 2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಪುನಶ್ಚೇತನಗೊಳಿಸುವ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಸಂಕಲ್ಪ ಮಾಡಿತ್ತು. ಈಗ ಭಾರತ್ ಜೋಡೋ ಯಾತ್ರೆ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಜನ ಸಂಪರ್ಕ ಕಾರ್ಯಕ್ರಮದ ರಾಜಕೀಯ ಲಾಭವನ್ನು ಪಡೆಯಲು ಉದ್ದೇಶಿಸಿದೆ. ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಲು ಈ ಜಾತ್ರೆಯನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ.