ರಾಜಸ್ಥಾನ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರಥ್ಯದಲ್ಲಿ ಭಾರತ್ ಜೋಡೋ ಯಾತ್ರೆಯು ರಾಜಸ್ಥಾನದ ಬುಂದಿ ಜಿಲ್ಲೆಯ ಬಲದೇವಪುರದಿಂದ ಪುನಾರಂಭಗೊಂಡಿದೆ. ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮೊದಲು ರಾಹುಲ್ 13 ಕಿ.ಮೀ. ಪ್ರದೇಶದಲ್ಲಿ ಹೆಜ್ಜೆ ಹಾಕಲಿದ್ದಾರೆ. ಉಳಿದ 9 ಕಿ.ಮೀ ಯಾತ್ರೆಯನ್ನು ಇಂದು ಸಂಜೆ ಕ್ರಮಿಸುವರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಮೇಶ್, 'ಭಾರತ್ ಜೋಡೋ ಯಾತ್ರೆಯು 95 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಹದಿಮೂರು ಕಿ.ಮೀ ಸಾಗಿದ ನಂತರ ರಾಹುಲ್ ಗಾಂಧಿಯವರು ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ರಾಹುಲ್ ಹೊಸ ಕಾಂಗ್ರೆಸ್ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಅಲ್ಲಿಂದ ಹಿಂತಿರುಗಿದ ಬಳಿಕ ಉಳಿದ 9 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಖ್ವಿಂದರ್ ಸಿಂಗ್ ಅವರು ಹಿಮಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಮುಕೇಶ್ ಅಗ್ನಿಹೋತ್ರಿ ಪದಗ್ರಹಣ ಮಾಡುವರು.