ಶ್ರೀನಗರ: ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಮೂಲಕ ಭಾರತ್ ಜೋಡೋ ಯಾತ್ರೆ ಮುಕ್ತಾಯ ಕಂಡಿದೆ. ಈ ಯಾತ್ರೆ 145 ದಿನಗಳ ಹಿಂದೆ, ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿತ್ತು.
ಬಿಳಿ ಟಿ-ಶರ್ಟ್ ಮತ್ತು ತೋಳಿಲ್ಲದ ಜಾಕೆಟ್ ಧರಿಸಿದ ರಾಹುಲ್ ಗಾಂಧಿ ಪಂಥಾಚೌಕ್‌ನ ಕ್ಯಾಂಪ್ ಸೈಟ್‌ನಲ್ಲಿ ಹಿಮಪಾತದ ನಡುವೆ ರಾಷ್ಟ್ರಗೀತೆಯೊಂದಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಮೌಲಾನಾ ಆಜಾದ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮತ್ತೊಂದು ಧ್ವಜಾರೋಹಣ ಸಮಾರಂಭದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಲವು ನಾಯಕರು ಭಾಗಿಯಾಗಿದ್ದರು. ಲಾಲ್ ಚೌಕ್‌ನಲ್ಲಿ ಸತತ ಎರಡನೇ ದಿನವೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಸ್ಥಳೀಯ ಆಡಳಿತ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಏರ್ಪಡಿಸಿತ್ತು.
ಐತಿಹಾಸಿಕ ಲಾಲ್‌ಚೌಕ್‌ನಲ್ಲಿ ಭಾನುವಾರ ತ್ರಿವರ್ಣ ಧ್ವಜ ಹಾರಿಸಿದ ರಾಹುಲ್ ಗಾಂಧಿ, "ಭಾರತಕ್ಕೆ ನೀಡಿದ ಭರವಸೆ ಈಡೇರಿಸಲಾಗಿದೆ. ಇದು ನನ್ನ ಜೀವನದ ಅತ್ಯಂತ ಸುಂದರವಾದ ಅನುಭವ. ಲಕ್ಷಗಟ್ಟಲೆ ಜನರನ್ನು ಭೇಟಿ ಮಾಡಿದ್ದೇನೆ, ಮಾತನಾಡಿದ್ದೇನೆ. ಈ ಅನುಭವವನ್ನು ನಿಮಗೆ ವಿವರಿಸಲು ನನ್ನ ಬಳಿ ಪದಗಳಿಲ್ಲ. ದೇಶವನ್ನು ಒಗ್ಗೂಡಿಸುವುದೇ ಯಾತ್ರೆಯ ಉದ್ದೇಶವಾಗಿತ್ತು. ದೇಶಾದ್ಯಂತ ಹರಡಿರುವ ಹಿಂಸಾಚಾರ, ದ್ವೇಷದ ವಿರುದ್ಧದ ಯಾತ್ರೆ ಇದು. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ" ಎಂದರು.
ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಈ ಪಯಣ ಸುಮಾರು 4,080 ಕಿಲೋಮೀಟರ್ ದೂರವನ್ನು 145 ದಿನಗಳಲ್ಲಿ ಕ್ರಮಿಸಿ, 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಹಾದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ತಲುಪಿದೆ. ಭಾನುವಾರ ರಾಹುಲ್ ಗಾಂಧಿ ಐತಿಹಾಸಿಕ ಲಾಲ್ ಚೌಕ್‌ಗೆ ತೆರಳಿ ಅಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದರು.
ಇದನ್ನೂ ಓದಿ:ಭಾರತ್ ಜೋಡೋ ಇಂದು ಶ್ರೀನಗರದಲ್ಲಿ ಸಮಾರೋಪ; ಪಕ್ಷದ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ, ರ್‍ಯಾಲಿ