ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರ ಹಂತ ಮುಗಿಸಿದ್ದು, ಇದೀಗ 'ಹಿಂದಿ ಭಾಷೆಯ ಹೃದಯ ಭಾಗ ಮಧ್ಯಪ್ರದೇಶ'ದಲ್ಲಿ ಸಾಗುತ್ತಿದೆ. ರಾಹುಲ್ ಸಹೋದರಿ ಹಾಗು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಸಂಜೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್‌ನಾಥ್ ಈಗಾಗಲೇ ತಿಳಿಸಿದ್ದಾರೆ.
ಅದ್ದೂರಿ ಸ್ವಾಗತಕ್ಕೆ ತಯಾರಿ:ಈಟಿವಿ ಭಾರತದೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಡಾ.ಗೋವಿಂದ್ ಸಿಂಗ್, ಮಧ್ಯಪ್ರದೇಶದ ಜನರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಿದ್ದಾರೆ. ನಿರುದ್ಯೋಗ, ನೋಟು ಅಮಾನ್ಯೀಕರಣ, ಸಂಕಷ್ಟದಲ್ಲಿರುವ ರೈತರು ಸೇರಿದಂತೆ ಮೋದಿ ಸರ್ಕಾರದ ತಪ್ಪು ನೀತಿಗಳಿಂದ ಕಂಗೆಟ್ಟಿರುವ ಜನರು ಸಾಥ್ ನೀಡಲಿದ್ದು, ರಾಹುಲ್ ಗಾಂಧಿ ಅವರಲ್ಲಿ ಹೊಸ ಭರವಸೆ ಕಾಣುತ್ತಿದ್ದಾರೆ ಎಂದು ಹೇಳಿದರು.
ಮಧ್ಯ ಪ್ರದೇಶದಲ್ಲಿ 382 ಕಿ.ಮೀ ಯಾತ್ರೆ:ಮಧ್ಯಪ್ರದೇಶದ ಬುರ್ಹಾನ್‌ಪುರ, ಖಾರ್ಗೋನ್, ಖಾಂಡ್ವಾ, ಇಂದೋರ್ ಮತ್ತು ಉಜ್ಜಯಿನಿ ಜಿಲ್ಲೆಗಳ ಮೂಲಕ 13 ದಿನಗಳ ಕಾಲ ಸುಮಾರು 382 ಕಿ.ಮೀ ಯಾತ್ರೆ ಕ್ರಮಿಸಲಿದೆ. ಇದಾದ ಬಳಿಕ ಅಗರ್ ಮಾಲ್ವಾ ಜಿಲ್ಲೆಯಿಂದ ರಾಜಸ್ಥಾನ ಪ್ರವೇಶಿಸಲಿದೆ.