ನಾಂದೇಡ್ (ಮಹಾರಾಷ್ಟ್ರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಲೋಲಿಯಿಂದ ಭಾರತ್ ಜೋಡೋ ಯಾತ್ರೆಯನ್ನಿಂದು ಪುನರಾರಂಭಿಸಿದ್ದು, ಪಾದಯಾತ್ರೆ 63ನೇ ದಿನಕ್ಕೆ ಕಾಲಿಟ್ಟಿದೆ.
ರಾಗಾ ಅವರನ್ನು ಸ್ವಾಗತಿಸಲು ನೆರೆದಿದ್ದ ಜನರೊಂದಿಗೆ ಸಂವಾದ ನಡೆಸಲು ಕೆಲವು ಸ್ಥಳಗಳಲ್ಲಿ ಅವರು ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಮುಂಬೈ ಪಕ್ಷದ ಮುಖ್ಯಸ್ಥ ಭಾಯಿ ಜಗತಾಪ್, ನಸೀಮ್ ಖಾನ್, ವಿಶ್ವಜಿತ್ ಕದಮ್ ಸೇರಿದಂತೆ ಮತ್ತಿತರರು ಜತೆಗಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮತ್ತು ಪಕ್ಷದ ನಾಯಕ ಕನ್ಹಯ್ಯಾ ಕುಮಾರ್ ಅವರು ಸೇವಾದಳದ ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಸಾಗಿದರು.
ನಾಂದೇಡ್ ಗುರುದ್ವಾರಕ್ಕೆ ರಾಹುಲ್ ಭೇಟಿ: ಮಂಗಳವಾರ ನಾಂದೇಡ್‌ನ ಗುರುದ್ವಾರವೊಂದಕ್ಕೆ ಭೇಟಿ ನೀಡಿದ್ದಾಗ ರಾಹುಲ್ ಗಾಂಧಿ ಮಾತನಾಡಿ, ನೋಟು ಅಮಾನ್ಯೀಕರಣ, ನಿರುದ್ಯೋಗ ಮತ್ತು ದ್ವೇಷದ ರಾಜಕಾರಣದ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸೇವಾದಳ ಕಾರ್ಯಕರ್ತ ಪಾಂಡೆಗೆ ಹೃದಯಾಘಾತ:ಭಾರತ್ ಜೋಡೋ ಯಾತ್ರೆಯ ವೇಳೆ ಮಂಗಳವಾರ ಬೆಳಗ್ಗೆ ಸೇವಾದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಸೇವಾದಳದ ಉಸ್ತುವಾರಿ ಕೃಷ್ಣಕುಮಾರ್ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದರು. ಇದರಿಂದ ಕಾಲ್ನಡಿಗೆ ಜಾಥಾ ಮಂಗಳವಾರ ಅಸ್ತವ್ಯಸ್ತಗೊಂಡಿತ್ತು. ಇಂದು ಮಹಾ ರಾಜ್ಯದಲ್ಲಿ ಮೂರನೇ ದಿನದ ಯಾತ್ರೆ ನಡೆಯುತ್ತಿದೆ. ಸೋಮವಾರ ರಾತ್ರಿ ನೆರೆಯ ತೆಲಂಗಾಣದಿಂದ ನಾಂದೇಡ್‌ನ ದೆಗ್ಲೂರ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹಾರಾಷ್ಟ್ರ ಪ್ರವೇಶಿಸಿತ್ತು.
ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ 382 ಕಿಮೀ: ಭಾರತ್ ಜೋಡೋ ಯಾತ್ರೆ, ಜನಸಂಪರ್ಕ ಕಾರ್ಯಕ್ರಮವು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿತ್ತು. ಈವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಯಾತ್ರೆ ಮುಗಿಸಿದ್ದು, ಪ್ರಸ್ತುತ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ 382 ಕಿಮೀ ಸಂಚರಿಸಲಿದೆ. ನವೆಂಬರ್ 20 ರಂದು ಮಧ್ಯಪ್ರದೇಶ ಪ್ರವೇಶಿಸಲಿದೆ. ಈ ಮುಂಚೆ ಮಹಾರಾಷ್ಟ್ರದಲ್ಲಿ 15 ವಿಧಾನಸಭೆ ಮತ್ತು ಆರು ಸಂಸದೀಯ ಕ್ಷೇತ್ರಗಳಲ್ಲಿ ಹಾಯ್ದು ಹೋಗಲಿದೆ.
ಇದನ್ನೂ ಓದಿ:ನಾನು ಭಯೋತ್ಪಾದಕನಲ್ಲ, ಭ್ರಷ್ಟನೂ ಅಲ್ಲ, ಜನರ ಪ್ರೀತಿಪಾತ್ರನು: ಸಿಎಂ ಕೇಜ್ರಿವಾಲ್