ಹೈದರಾಬಾದ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೋವಿಡ್ -19 ಲಸಿಕೆ ಕೋವಾಕ್ಸಿನ್‌ನ ತುರ್ತು ಬಳಕೆ ಪಟ್ಟಿ (ಇಯುಎಲ್) ಮೌಲ್ಯಮಾಪನಕ್ಕಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಪೂರ್ವ ಸಲ್ಲಿಕೆ ಸಭೆಯನ್ನು ಜೂನ್ 23 ರಂದು ನಿಗದಿಪಡಿಸಲಾಗಿದೆ. ಡಬ್ಲ್ಯುಎಚ್‌ಒನ ಇಯುಎಲ್‌ಗೆ ಬೇಕಾದ ಶೇಕಡಾ 90 ರಷ್ಟು ದಾಖಲಾತಿಗಳನ್ನು ಸಲ್ಲಿಸಿದ್ದಾಗಿ ಕಳೆದ ತಿಂಗಳು ಭಾರತ್ ಬಯೋಟೆಕ್ ತಿಳಿಸಿತ್ತು. ಉಳಿದ ದಾಖಲೆಗಳನ್ನು ಈ ತಿಂಗಳು ಸಲ್ಲಿಸಬೇಕಾಗಿದೆ.
ಭಾರತ್ ಬಯೋಟೆಕ್ ಕಳೆದ ತಿಂಗಳು ಜುಲೈ - ಸೆಪ್ಟೆಂಬರ್ ಅವಧಿಯಲ್ಲಿ ತುರ್ತು ಬಳಕೆ ಪಟ್ಟಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ತನ್ನ COVID-19 ಲಸಿಕೆ ಕೋವ್ಯಾಕ್ಸಿನ್‌ಗೆ ಅನುಮೋದನೆ ನಿರೀಕ್ಷಿಸುವುದಾಗಿ ಹೇಳಿತ್ತು. ಡಬ್ಲ್ಯುಎಚ್‌ಒ ಮಾರ್ಗಸೂಚಿಗಳ ಪ್ರಕಾರ, ಇಯುಎಲ್ ಎನ್ನುವುದು ಸಾರ್ವಜನಿಕ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಹೊಸ ಅಥವಾ ಪರವಾನಗಿ ಪಡೆಯದ ಉತ್ಪನ್ನಗಳನ್ನು ಬಳಸುವ ಪ್ರಕ್ರಿಯೆ ಸುಗಮಗೊಳಿಸುವ ಕಾರ್ಯವಿಧಾನವಾಗಿದೆ.
ಡಬ್ಲ್ಯುಎಚ್‌ಒ ಪ್ರಕಾರ, ಪೂರ್ವ-ಸಲ್ಲಿಕೆ ಸಭೆಗಳು ಅಮೆಡಿಸಿನ್ಸ್ ದಸ್ತಾವೇಜನ್ನು ಸಲ್ಲಿಸುವ ಮೊದಲು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಒಂದು ಅವಕಾಶವನ್ನು ಒದಗಿಸುತ್ತದೆ. ಜೊತೆಗೆ ಅರ್ಜಿದಾರರಿಗೆ ತಮ್ಮ ಉತ್ಪನ್ನವನ್ನು ಮೌಲ್ಯಮಾಪನ ಮಾಡುವಲ್ಲಿ ತೊಡಗಿಸಿಕೊಳ್ಳುವ ಡಬ್ಲ್ಯುಎಚ್‌ಒ ಔಷಧ ಮೌಲ್ಯಮಾಪಕರನ್ನು ಭೇಟಿ ಮಾಡಲು ಅವಕಾಶವನ್ನು ಒದಗಿಸುತ್ತದೆ.
ಕೋವಾಕ್ಸಿನ್‌ಗಾಗಿ ಇಯುಎಲ್ ಪಡೆಯಲು ಈಗಾಗಲೇ ಶೇಕಡಾ 90 ರಷ್ಟು ದಾಖಲೆಗಳನ್ನು ಡಬ್ಲ್ಯುಎಚ್‌ಒಗೆ ಸಲ್ಲಿಸಿದೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಕೇಂದ್ರಕ್ಕೆ ತಿಳಿಸಿದೆ ಎಂದು ಮೂಲಗಳು ಸೂಚಿಸಿವೆ. ಉಳಿದ ದಾಖಲೆಗಳನ್ನು ಜೂನ್ ತಿಂಗಳೊಳಗೆ ಸಲ್ಲಿಸುವ ನಿರೀಕ್ಷೆಯಿದೆ.
ಸದ್ಯ ಭಾರತದಲ್ಲಿ ಮೂರು ಲಸಿಕೆಗಳನ್ನು ಬಳಸಲಾಗುತ್ತಿದ್ದು, ಅದರಲ್ಲಿ ಕೋವ್ಯಾಕ್ಸಿನ್ ಕೂಡ ಒಂದು. ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸುತ್ತಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ - ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿವೆ.