ಹೈದರಾಬಾದ್: ಈಗಾಗಲೇ ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಮತ್ತು ಕೊಮೊರ್ಬಿಡಿಟಿ (ಒಂದಕ್ಕಿಂತ ಹೆಚ್ಚಿನ ಕಾಯಿಲೆ) ಹೊಂದಿರುವವರು ಕೊರೊನಾ ವೈರಸ್ ವಿರುದ್ದ ಲಸಿಕೆ ಪಡೆಯಲು ಪ್ರಾರಂಭಿಸಿದ್ದಾರೆ. ಮಾರ್ಚ್ 3, 2021 ರಿಂದ ಭಾರತ್ ಬಯೋಟೆಕ್ ಸಂಸ್ಥೆ ಅಬಿವೃದ್ದಿಪಡಿಸಿರುವ ಇಂಟ್ರಾನಾಸಲ್ (ಮೂಗಿನ ಮೂಲಕ ನೀಡುವ) ಲಸಿಕೆ (ಬಿಬಿವಿ 154) ಹಂತ -1 ಪ್ರಯೋಗವು ಹೈದರಾಬಾದ್ ಮತ್ತು ನಾಗ್ಪುರ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಆರಂಭವಾಗಿದ್ದು, ಇದು ಶೇ, 81 ರಷ್ಟು ಯಶಸ್ವಿಯೂ ಆಯಿತು ಎಂಬುದು ಸಾಬೀತಾಗಿದೆ. ಹಾಗಾದರೆ, ಮೂಗಿನ ಮೂಲಕ ನೀಡುವ ವ್ಯಾಕ್ಸಿನೇಷನ್ ನಿಖರವಾಗಿ ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂಬುದನ್ನು ನಾವೀಗ ತಿಳಿಯೋಣ.
ಇಂಟ್ರಾನಾಸಲ್ ಲಸಿಕೆಗಳು ಮತ್ತು ಅವುಗಳ ಕಾರ್ಯವಿಧಾನ
- ಈವರೆಗೆ ನೀಡಲಾದ ಲಸಿಕೆಗಳನ್ನು ಇಂಟ್ರಾಮಸ್ಕುಲರ್ ಅಥವಾ ಸಬ್ಕ್ಯುಟೇನಿಯಸ್ ಚುಚ್ಚುಮದ್ದಿನ ಮೂಲಕ ನೀಡಲಾಗಿತ್ತು. ಆದರೆ, ಈ ಲಸಿಕಾ ವಿಧಾನವು ಮೂಗಿನ ಹೊಳ್ಳೆಯ ಮೂಲಕ ನೀಡಲಾಗುವುದರಿಂದ, ಇದು ಸೂಜಿಯ ಮೇಲಿನ ಅನಗತ್ಯ ಖರ್ಚನ್ನು ಕಡಿಮೆ ಮಾಡುತ್ತದೆ.
- ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡಲು 'ಭಾರತ್ ಬಯೋಟೆಕ್' ಸಂಸ್ಥೆಯು ಅಭಿವೃದ್ಧಿಪಡಿಸಿರುವ ಇಂಟ್ರಾನಾಸಲ್ ಲಸಿಕೆಯು ಸೂಜಿ ಮುಕ್ತವಾಗಿದೆ. ಸಾಮಾನ್ಯವಾಗಿ ಕೊರೊನಾ ವೈರಸ್ ನಮ್ಮ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುವುದರಿಂದ, ಈ ಲಸಿಕೆ ರಕ್ತದಲ್ಲಿ ರೋಗ ನಿರೋಧಕ ಶಕ್ತಿಯನ್ನು ಮತ್ತು ಮೂಗಿನಲ್ಲಿ ಪ್ರೋಟೀನ್‌ಗಳನ್ನು ಉತ್ಪಾದಿಸಿ ವೈರಸ್ ವಿರುದ್ಧ ಹೋರಾಡುತ್ತದೆ.
- ಈ ರೀತಿಯ ಲಸಿಕೆಯ ನಿರ್ವಹಣೆ ಸುಲಭವಲ್ಲದಿದ್ದರೂ, ಸೂಜಿಗೆ ಭಯಪಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಲ್ಲದೆ, ಇದನ್ನು ಸೂಜಿ, ಸಿರಿಂಜ್ಗಳ ಬಳಕೆಯಿಲ್ಲದೆ ನೀಡುವುದರಿಂದ ಇದು ರೋಗಿಗಳ ನಡುವೆ ಹರಡಬಹುದಾದ ಸೋಂಕನ್ನು ಕಡಿಮೆಗೊಳಿಸಲಿದೆ.
- ಇಂಟ್ರಾನಾಸಲ್ ಲಸಿಕೆಯನ್ನು ಇತರೆ ಲಸಿಕೆಗಳಿಗೆ ಹೋಲಿಸಿದರೆ, ಉತ್ತಮ ರೋಗನಿರೋಧಕ ಶಕ್ತಿಯನ್ನು ಒದಗಿಸುವುದರ ಜೊತೆಗೆ ಇದನ್ನು ಸ್ವಯಂ-ನಿರ್ವಹಣೆ ಮಾಡುವುದು ಸುಲಭವಾಗಿದೆ. ಅಲ್ಲದೇ, ಇದು ಸೂಜಿ, ಸಿರಿಂಜ್ಗಳಂತಹ ವೈದ್ಯಕೀಯ ಉಪಭೋಗ್ಯದ ಬಳಕೆಯನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ ಮತ್ತು ವ್ಯಾಕ್ಸಿನೇಷನ್ ಡ್ರೈವ್ ಮೇಲಿನ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ.