ಹೈದರಾಬಾದ್: 15-18 ವಯಸ್ಸಿನ ಮಕ್ಕಳಿಗೆ ಕೋವಿಡ್ -19 ಲಸಿಕೆಗ ನೀಡಲಾಗುತ್ತಿದೆ ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿದ್ದು, ಈ ನಿರ್ದಿಷ್ಟ ವಯಸ್ಸಿನ ವರ್ಗಕ್ಕೆ ಕೋವ್ಯಾಕ್ಸಿನ್ ದೇಶದಲ್ಲಿ ಏಕೈಕ ಅನುಮೋದಿತ ಕೋವಿಡ್ ಲಸಿಕೆಯಾಗಿದೆ. ಹಾಗಾಗಿ ಬೇರೆ ಯಾವುದೇ ಲಸಿಕೆಗಳನ್ನು ಮಕ್ಕಳಿಗೆ ನೀಡದಂತೆ ಎಚ್ಚರ ವಹಿಸಬೇಕೆಂದು ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್ ಮನವಿ ಮಾಡಿದೆ.
"15-18 ವರ್ಷ ವಯಸ್ಸಿನವರಿಗೆ ಇತರೆ ಕೋವಿಡ್ 19 ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ಹಲವಾರು ವರದಿಗಳನ್ನು ನಾವು ಸ್ವೀಕರಿಸಿದ್ದೇವೆ. ಆದರೆ ಈ ವಯೋಮಾನದ ವರ್ಗದವರಿಗೆ ಕೋವ್ಯಾಕ್ಸಿನ್ ಮಾತ್ರ ನೀಡಬೇಕು, ಈ ವಿಚಾರದಲ್ಲಿ ಆರೋಗ್ಯ ಕಾರ್ಯಕರ್ತರು ಹೆಚ್ಚು ಜಾಗರೂಕರಾಗಿರಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಭಾರತ್ ಬಯೋಟೆಕ್ ಹೇಳಿಕೆ ಬಿಡುಗಡೆ ಮಾಡಿದೆ.
2 ರಿಂದ18 ವರ್ಷ ವಯಸ್ಸಿನವರಿಗೆ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಗಾಗಿ ಸಂಪೂರ್ಣ ಕ್ಲಿನಿಕಲ್ ಟ್ರಯಲ್ಸ್ ಮೌಲ್ಯಮಾಪನದ ಆಧಾರದ ಮೇಲೆ ಕೋವಾಕ್ಸಿನ್ ಅನುಮೋದನೆ ಪಡೆದುಕೊಂಡಿದೆ. ಪ್ರಸ್ತುತ ಇದು ಭಾರತದಲ್ಲಿ ಮಕ್ಕಳಿಗಾಗಿ ಅನುಮೋದಿಸಲಾದ ಏಕೈಕ ಕೋವಿಡ್ 19 ಲಸಿಕೆಯಾಗಿದೆ ಎಂದು ಲಸಿಕಾ ತಯಾರಿಕಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜನವರಿ 3, 2022 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ವಯೋಮಾನದವರಿಗೆ 'ಕೋವಾಕ್ಸಿನ್' ಲಸಿಕೆಯನ್ನು ಮಾತ್ರ ನೀಡಬೇಕೆಂದು ಮತ್ತು ಇದೇ ಲಸಿಕೆಯನ್ನು ಪೂರೈಸುವುದಾಗಿ ಎಂದು ತಿಳಿಸಿದೆ.
ಇದನ್ನು ಓದಿ:ಕೊವ್ಯಾಕ್ಸಿನ್ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸೆಟಮಲ್ ನೀಡಬಹುದೇ: ಭಾರತ್ ಬಯೋಟೆಕ್ ಹೇಳಿದ್ದೇನು?