ಹೈದರಾಬಾದ್:ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಕಂಪನಿಯ ಕೊರೊನಾ ಲಸಿಕೆಯಾದ 'ಕೋವ್ಯಾಕ್ಸಿನ್'ಗೆ ಭಾರೀ ಬೇಡಿಕೆ ಉಂಟಾಗಿದ್ದು, 2022 ರಲ್ಲಿ 60 ದೇಶಗಳಿಗೆ ಲಸಿಕೆ ಪೂರೈಕೆಯಾಗಲಿದೆ.
ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ವಿವಿಧ ದೇಶಗಳಲ್ಲಿ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಇದರಿಂದಾಗಿ ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಲಸಿಕೆ ರಫ್ತು ಮಾಡಲಾಗುವುದು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಭಾರತ್ ಬಯೋಟೆಕ್ 60 ದೇಶಗಳಿಗೆ ಲಸಿಕೆಯನ್ನು ರಫ್ತು ಮಾಡುವಷ್ಟು ಸಮರ್ಥವಾಗಿದೆ. ಇದಕ್ಕೂ ಮೊದಲು ಈಗಾಗಲೇ ಬೇಡಿಕೆ ಇಟ್ಟ ದೇಶಗಳಿಗೆ ಲಸಿಕೆ ಪೂರೈಸಿದ ಬಳಿಕ ಇತರ ದೇಶಗಳಿಗೆ ಲಸಿಕೆ ಪೂರೈಸಲು ಉತ್ಪಾದನೆಗೆ ಇನ್ನಷ್ಟು ವೇಗ ನೀಡಲಾಗುವುದು ಎಂದಿದ್ದಾರೆ.
ಏತನ್ಮಧ್ಯೆ ಒಕುಜೆನ್ ಸಂಸ್ಥೆ ಜೊತೆಗೂಡಿ ಅಮೆರಿಕ ಮತ್ತು ಕೆನಡಾ ದೇಶಗಳಲ್ಲೂ ಕೋವ್ಯಾಕ್ಸಿನ್ ಲಸಿಕೆ ಪೂರೈಸಲು ಅನುಮೋದನೆ ಪಡೆದುಕೊಳ್ಳಲಾಗುವುದು. ವಿಶ್ವದ ವಿವಿಧ ದೇಶಗಳಿಂದ ಲಸಿಕೆ ಬೇಡಿಕೆ ಬಂದ ಕಾರಣ ಭಾರತ್ ಬಯೋಟೆಕ್ ಕಂಪನಿಯ ಲಸಿಕೆ ಉತ್ಪಾದನಾ ಸ್ಥಾವರಗಳಿರುವ ಹೈದರಾಬಾದ್, ಮಾಲೂರು, ಅಂಕಲೇಶ್ವರ ಮತ್ತು ಪುಣೆಯಲ್ಲಿ ಲಸಿಕೆ ತಯಾರಿಕೆಗೆ ವೇಗ ನೀಡಲಾಗುವುದು. ಈ ಘಟಕಗಳು ವರ್ಷಕ್ಕೆ 100 ಕೋಟಿ ಡೋಸ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಇದೆ ಎಂದು ಕಂಪನಿ ತಿಳಿಸಿದೆ.
ಕೇಂದ್ರ ಸರ್ಕಾರ ಜನವರಿ 3 ರಿಂದ 15-18 ವರ್ಷ ವಯೋಮಾನದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಸೂಚಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಲಸಿಕೆ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ. ಇದಲ್ಲದೇ, ಇಂಟ್ರಾನಾಸಲ್ ಲಸಿಕೆಯನ್ನು ಪರಿಚಯಿಸಲು ಕೂಡ ಕಂಪನಿ ತಯಾರಿ ನಡೆಸುತ್ತಿದೆ. ಈಗಾಗಲೇ ಇಂಟ್ರಾನಾಸಲ್ ಲಸಿಕೆಯ ಕ್ಲಿನಿಕಲ್ ಟೆಸ್ಟಿಂಗ್ ನಡೆಯುತ್ತಿದ್ದು, ಡಿಜಿಸಿಐನಿಂದ ಅನುಮೋದನೆ ಪಡೆದುಕೊಳ್ಳಲು ಸಜ್ಜಾಗಿದೆ.
ಇದನ್ನೂ ಓದಿ:ಪಿಪಿಹೆಚ್ ರಕ್ತಸ್ರಾವ: ಗರ್ಭಿಣಿಯರ ರಕ್ಷಣೆಗೆ ಪೂರ್ವ ಸಿದ್ಧತೆ ಅಗತ್ಯ..