ಹೈದರಾಬಾದ್ :ಕೋವಿಡ್ ಲಸಿಕೆ ತಯಾರಿಕಾ ಸಂಸ್ಥೆಯಾಗಿರುವ ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಲಸಿಕೆಯನ್ನು ವಾರ್ಷಿಕವಾಗಿ 70 ಕೋಟಿ ಡೋಸ್ನಷ್ಟು ಉತ್ಪಾದಿಸಲು ಮುಂದಾಗಿದೆ.
ಹೈದರಾಬಾದ್ ಹಾಗೂ ಬೆಂಗಳೂರಿನ ಕೇಂದ್ರದಲ್ಲಿ ಹಂತ ಹಂತವಾಗಿ ಕೋವ್ಯಾಕ್ಸಿನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಾಗಿ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಪ್ರಾರಂಭದಲ್ಲಿ ಈ ಸಂಸ್ಥೆ ಸುಮಾರು 20 ಕೋಟಿ ಡೋಸ್ ಉತ್ಪಾದನೆಯ ಸಾಮರ್ಥ್ಯ ಹೊಂದಿತ್ತು.
ಆದರೆ, ದೇಶದಲ್ಲಿ ಲಸಿಕೆ ಅಗತ್ಯತೆ ಹೆಚ್ಚಾಗಿರುವ ಹಿನ್ನೆಲೆ ಉತ್ಪಾದನೆ ಹೆಚ್ಚಿಸಲು ಸಂಸ್ಥೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಲಸಿಕೆಗಳ ತಯಾರಿಕೆಯಲ್ಲಿ ಸಾಮರ್ಥ್ಯ ವಿಸ್ತರಣೆ ಸುದೀರ್ಘ ಪ್ರಕ್ರಿಯೆಯಾಗಿದೆ. ಹೂಡಿಕೆಗಳು ಮತ್ತು ಹಲವಾರು ವರ್ಷಗಳ ಅಗತ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಉತ್ಪಾದನಾ ಸಾಮರ್ಥ್ಯವನ್ನು ಅಲ್ಪಾವಧಿಯಲ್ಲಿಯೇ ವಿಸ್ತರಿಸಲು ಸಮರ್ಥವಾಗಿದೆ. ಮುಖ್ಯವಾಗಿ ಹೊಸದಾಗಿ ವಿನ್ಯಾಸಗೊಳಿಸಲಾದ ಬಿಎಸ್ಎಲ್ -3 ಸೌಲಭ್ಯಗಳ ಲಭ್ಯತೆಯಿಂದಾಗಿ ಲಸಿಕೆ ಉತ್ಪಾದನೆ ವೇಗ ಹೆಚ್ಚಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ಭಾರತದಲ್ಲಿ ಲಸಿಕೆ ತಯಾರಿಸಲು ಭಾರತ್ ಬಯೋಟೆಕ್ ಸಂಸ್ಥೆ ಇಂಡಿಯನ್ ಇಮ್ಯೂನೊಲಾಜಿಕಲ್ಸ್ (ಐಐಎಲ್) ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.