ನವದೆಹಲಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ. ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾ ರೂಪ ಪಡೆದಿರುವುದು ಈಗಾಗಲೇ ನಾವೆಲ್ಲ ನೋಡಿದ್ದೇವೆ. ಬಿಹಾರದಲ್ಲಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಈ ಕುರಿತು ದೇಶದ ಎಲ್ಲ ರಾಜ್ಯಗಳಲ್ಲಿ ಆಡಳಿತ, ಭದ್ರತಾ ವ್ಯವಸ್ಥೆ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ.
ದೇಶಾದ್ಯಂತ ಅಗ್ನಿಪಥ ಯೋಜನೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹಲವು ರಾಜ್ಯಗಳಲ್ಲಿ ಯುವಕರು ಈ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಗ್ನಿಪಥ ಯೋಜನೆ ಕುರಿತು ಭಾನುವಾರ ಮೂರು ಸೇನೆಗಳ ಮಹಾದಂಡ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ, ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರತಿಭಟನಾ ನಿರತ ಯುವಕರು ಸೋಮವಾರ ಭಾರತ್ ಬಂದ್ ಘೋಷಿಸಿದ್ದಾರೆ.
ಭಾರತ್ ಬಂದ್ ಘೋಷಣೆ ಹಿನ್ನೆಲೆಯಲ್ಲಿ ಆರ್‌ಪಿಎಫ್ ಮತ್ತು ಜಿಆರ್‌ಪಿ ಕಟ್ಟೆಚ್ಚರ ವಹಿಸಿವೆ. ಹಿಂಸಾಚಾರದಲ್ಲಿ ತೊಡಗುವ ಪ್ರತಿಭಟನಾಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭದ್ರತಾ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ. ಮೊಬೈಲ್, ಕ್ಯಾಮರಾ, ಸಿಸಿಟಿವಿ ಮೂಲಕ ಹಿಂಸಾಚಾರ ನಡೆಸುವವರ ವಿರುದ್ಧ ಡಿಜಿಟಲ್ ಸಾಕ್ಷ್ಯ ಸಂಗ್ರಹಿಸಲೂ ಇದೇವೇಳೆ ಆದೇಶ ನೀಡಲಾಗಿದೆ.
ಭಾರತ್ ಬಂದ್ ಕರೆ - ಪಂಜಾಬ್ ಪೊಲೀಸರು ಅಲರ್ಟ್:ಸೇನಾ ನೇಮಕಾತಿಗಾಗಿ ಆರಂಭಿಸಲಾಗಿರುವ ಹೊಸ ಅಗ್ನಿಪಥ್ ಯೋಜನೆ ವಿರುದ್ಧ ಸೋಮವಾರ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ಘೋಷಿಸಿದ್ದಾರೆ. ಪಂಜಾಬ್‌ನ ಎಲ್ಲ ಪ್ರಮುಖ ಮಿಲಿಟರಿ ಕೋಚಿಂಗ್ ಸಂಸ್ಥೆಗಳ ಸುತ್ತ ಭದ್ರತೆ ಹೆಚ್ಚಿಸಲಾಗಿದೆ.
ಹರಿಯಾಣದಲ್ಲೂ ಬಿಗಿ ಬಂದೋಬಸ್ತ್: ಹರ್ಯಾಣದಲ್ಲೂ ಭಾರತ್ ಬಂದ್ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಫರಿದಾಬಾದ್ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಭದ್ರತಾ ವ್ಯವಸ್ಥೆ ಕಾಪಾಡಲು ಫರಿದಾಬಾದ್‌ನಲ್ಲಿ ಇಂದು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಜಾರ್ಖಂಡ್‌ನಲ್ಲಿ ಶಾಲೆಗಳಿಗೆ ರಜೆ: ಮಧ್ಯ ಭಾರತದಲ್ಲಿಯೂ ಅಗ್ನಿಪಥ್ ಯೋಜನೆ ಕಿಚ್ಚು ಜೋರಾಗಿಯೇ ಇದೆ. ಯುವಕರು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಸೋಮವಾರ ಎಲ್ಲ ಶಾಲೆಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಾರ್ಖಂಡ್‌ನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಾರ್ಖಂಡ್ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ:ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ.. 35 ವಾಟ್ಸಾಪ್ ಗ್ರೂಪ್ ನಿಷೇಧ