ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರ ಹೋರಾಟ ಶುರುವಾಗಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ. ಇಂದು ಮುಂಜಾನೆಯಿಂದಲೇ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾಲುಗಟ್ಟಿ ನಿಂತ ಸಾವಿರಾರು ವಾಹನಗಳು
ಭಾರತ್ ಬಂದ್ ಹಿನ್ನೆಲೆ ದೆಹಲಿ ಪ್ರವೇಶಿಸುವ ವಾಹನಗಳನ್ನು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ತಪಾಸಣೆ ನಡೆಸುತ್ತಿರುವುದರಿಂದ ಗುರುಗ್ರಾಮ - ದೆಹಲಿ, ದೆಹಲಿ-ನೋಯ್ಡಾ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಂದಾಜು ಒಂದೂವರೆ ಕಿಲೋ ಮೀಟರ್ಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿವೆ. ಅಲ್ಲದೇ, ಹಲವಾರು ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.
ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಪ್ರತಿಭಟನೆ
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ರೈತ ಸಂಘಟನೆ ಇಂದು ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಪ್ರತಿಭಟನೆ ನಡೆಸುತ್ತಿದೆ. ಈ ಸಂಘಟನೆಯು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸಿ ಪ್ರತಿಭಟಿಸುವುದಾಗಿ ಘೋಷಿಸಿತ್ತು. ಇಂದು ಬೆಳಗ್ಗೆ, ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಗಾಜಿಪುರ ಪ್ರತಿಭಟನಾ ಸ್ಥಳದ ಬಳಿ ನಿರ್ಬಂಧಿಸಲಾಗಿದೆ. ಇದು ಉತ್ತರ ಪ್ರದೇಶದಿಂದ ಬರುವವರ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: ಭಾರತ ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ: ಸಿಎಂ ಬೊಮ್ಮಾಯಿ