ಕರ್ನಾಟಕ

karnataka

ETV Bharat / bharat

57ನೇ ಹುಟ್ಟುಹಬ್ಬದಂದೇ ರಾಜಸ್ಥಾನದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಭಜನ್​ ಲಾಲ್​ ಶರ್ಮಾ - ಪ್ರೇಮ್​ ಚಂದ್​ ಬೈರ್ವಾ

Rajasthan CM Oath taking: ಮೊದಲ ಬಾರಿಗೆ ಸಂಗನೇರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಭಜನ್​ ಲಾಲ್​ ಶರ್ಮಾ ಅವರು ಇದೀಗ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

bhajan lal sharma took oath as new cm of rajasthan
ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಭಜನ್​ ಲಾಲ್​ ಶರ್ಮಾ

By ETV Bharat Karnataka Team

Published : Dec 15, 2023, 1:14 PM IST

Updated : Dec 15, 2023, 2:13 PM IST

ಜೈಪುರ (ರಾಜಸ್ಥಾನ): ಮೊದಲ ಬಾರಿಗೆ ಶಾಸಕರಾಗಿ ಗೆದ್ದಿರುವ ಭಜನ್ ​ಲಾಲ್​ ಶರ್ಮಾ ಅವರು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಇಂದು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ತಮ್ಮ 57ನೇ ಹುಟ್ಟುಹಬ್ಬದ ದಿನವೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಭಜನ್​ ಲಾಲ್​ ಶರ್ಮಾ ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸಮಾರಂಭದ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಜೈಪುರದ ರಾಮ್​ನಿವಾಸ್​ ಭಾಗ್​ನ ಅಲ್ಬರ್ಟ್​ ಹಾಲ್​ ಎದುರು ಆಯೋಜಿಸಿರುವ ಸಮಾರಂಭದಲ್ಲಿ ಭಜನ್​ ಲಾಲ್ ಶರ್ಮಾ​ ಪ್ರಮಾಣವಚನ ಸ್ವೀಕರಿಸಿದರು. ದಿಯಾ ಕುಮಾರಿ ಹಾಗೂ ಪ್ರೇಮ್​ ಚಂದ್​ ಬೈರ್ವಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೂವರಿಗೂ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್​ ಮಿಶ್ರಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸುಮಾರು 1 ಲಕ್ಷಕ್ಕೂ ಅಧಿಕ ಜನರು ನೂತನ ಸಿಎಂ ಹಾಗೂ ಡಿಸಿಎಂಗಳ ಪದಗ್ರಹಣಕ್ಕೆ ಸಾಕ್ಷಿಯಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ. ನಡ್ಡಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ವಸುಂಧರ ರಾಜೆ ಸೇರಿದಂತೆ ಹಲವಾರು ಕೇಂದ್ರ ಸಚಿವರು ಹಾಗೂ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಮೋಹನ್​ ಯಾದವ್​ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಅಶೋಕ್​ ಗೆಹ್ಲೋಟ್​ ಉಪಸ್ಥಿತಿ ಎಲ್ಲರ ಗಮನ ಸೆಳೆಯಿತು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಭಜನ್​ ಲಾಲ್​ ಶರ್ಮಾ ಜೈಪುರದ ಗೋವಿಂದ್​ ದೇವ್​ ದೇವಸ್ಥಾನದಲ್ಲಿ ಪೂಜೆ ಕೊಟ್ಟು, ಪ್ರಾರ್ಥನೆ ಸಲ್ಲಿಸಿ ಆಗಮಿಸಿದ್ದರು. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಬಹುಮತದೊಂದಿಗೆ ಅದ್ಭತ ಗೆಲುವು ಸಾಧಿಸಿತ್ತು. ಭಜನ್​ ಲಾಲ್​ ಶರ್ಮಾ ಅವರು ಮೊದಲ ಬಾರಿಗೆ ಸಂಗನೇರ್​ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಶರ್ಮಾ ಇದೀಗ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸುವ ಚುಕ್ಕಾಣಿ ಹಿಡಿದಿದ್ದಾರೆ.

ಯಾರಿವರು ಭಜನ್​ಲಾಲ್​ ಶರ್ಮಾ:ಪೂರ್ವ ರಾಜಸ್ಥಾನದ ಭರತ್​ಪುರ ಜಿಲ್ಲೆಯ ಅಟ್ಟರಿ ಎಂಬ ಪುಟ್ಟ ಗ್ರಾಮದ ನಿವಾಸಿಯಾಗಿರುವ ಮುಖ್ಯಮಂತ್ರಿ ಭಜನ್​ ಲಾಲ್​ ಶರ್ಮಾ ಅವರು ರೈತ ಕುಟಂಬದಿಂದ ಬಂದವರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಶರ್ಮಾ ನೇರವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ಪಡೆದವರು. ಇತ್ತೀಚೆಗೆ ನಡೆದು ವಿಧಾನಸಭಾ ಚುನಾವಣೆಯಲ್ಲಿ ಸಂಗನೇರ್​ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಜನ್​ ಲಾಲ್​ ಶರ್ಮಾ 1,45,162 ಮತಗಳನ್ನು ಪಡೆದು, ಕಾಂಗ್ರೆಸ್​ ಅಭ್ಯರ್ಥಿ ಪುಷ್ಪೇಂದ್ರ ಭಾರದ್ವಾಜ್​ ಅವರನ್ನು 48,000 ಮತಗಳಿಂದ ಸೋಲಿಸಿದ್ದರು. ಇತ್ತೀಚೆಗೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಭಜನ್​ ಲಾಲ್​ ಶರ್ಮಾ ಹೆಸರನ್ನು ಪ್ರಸ್ತಾಪಿಸಿದಾಗ ಎಲ್ಲಾ ಶಾಸಕರು ಸರ್ವಾನುಮತದಿಂದ ಒಪ್ಪಿಸಿಗೆ ಸೂಚಿಸಿದ್ದರು.

ಇದನ್ನೂ ಓದಿ:ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೂ ಮುನ್ನ ಭಜನ್‌ಲಾಲ್ ಶರ್ಮಾ ಪೂಜೆ, ಪ್ರಾರ್ಥನೆ

Last Updated : Dec 15, 2023, 2:13 PM IST

ABOUT THE AUTHOR

...view details