ಚಂಡೀಗಢ(ಪಂಜಾಬ್) :ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಮಾಜಿ ಸಚಿವರು, ಶಾಸಕರಿಗೆ ಭಗವಂತ್ ಮಾನ್ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಮನೆ ಖಾಲಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
57 ಮಾಜಿ ಸಚಿವರು ಹಾಗೂ ಶಾಸಕರಿಗೆ ನೋಟಿಸ್ ಹೊರಡಿಸಲಾಗಿದ್ದು, ಮಾರ್ಚ್ 26ರೊಳಗೆ ಸರ್ಕಾರಿ ಫ್ಲ್ಯಾಟ್ ಮತ್ತು ಬಂಗಲೆಗಳನ್ನ ಖಾಲಿ ಮಾಡುವಂತೆ ನೋಟಿಸ್ ಹೊರಡಿಸಲಾಗಿದೆ.
ಈ ಹಿಂದಿನ ಚರಣ್ ಸಿಂಗ್ ಚನ್ನಿ ಸರ್ಕಾರ 17 ಮಾಜಿ ಸಚಿವರು ಹಾಗೂ 40 ಶಾಸಕರಿಗೆ ಸರ್ಕಾರಿ ಬಂಗಲೆ ಹಾಗೂ ಫ್ಲ್ಯಾಟ್ಗಳನ್ನ ವಾಸಮಾಡಲು ನೀಡಿತ್ತು. ಇದೀಗ ಅವುಗಳನ್ನೆಲ್ಲ ತೊರೆಯುವಂತೆ ಪಂಜಾಬ್ ನೂತನ ಸಿಎಂ ಮಾನ್ ಆದೇಶ ಹೊರಡಿಸಿದ್ದಾರೆ. ಇವರಿಗೆ ನೀಡಿರುವ ನಿವಾಸಗಳನ್ನ ಖಾಲಿ ಮಾಡುತ್ತಿದ್ದಂತೆ ಹೊಸ ಸಚಿವರು ಹಾಗೂ ಶಾಸಕರಿಗೆ ಈ ಬಂಗಲೆ, ಫ್ಲ್ಯಾಟ್ ಹಂಚಿಕೆ ಮಾಡುವ ಸಾಧ್ಯತೆ ಇದೆ.
ಪಂಜಾಬ್ನ 18ನೇ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಇಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಾರ್ಚ್ 19ರಂದು ರಾಜಭವನದಲ್ಲಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.